ನಾನೇನು ಮಾಡಿದರೂ ತಪ್ಪು, ಮಾಡದಿದ್ದರೂ ತಪ್ಪು: ಬ್ಯಾಂಕ್‌ಗಳ ವಿರುದ್ಧ ಮಲ್ಯ ಟೀಕಾಪ್ರಹಾರ
ಹೊಸದಿಲ್ಲಿ,ಮಾ.28: ಯುನೈಟೆಡ್ ಬ್ರೆವರೀಸ್ ಹೋಲ್ಡಿಂಗ್ಸ್ ಲಿ.(ಯುಬಿಎಚ್‌ಎಲ್)ನಲ್ಲಿದ್ದ ತನ್ನ 74 ಶೇರುಗಳು 1,000 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಮಾರಾಟವಾದ ನಂತರ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿರುದ್ಧ ದೇಶಭ್ರಷ್ಟ ಮದ್ಯದ ದೊರೆ ವಿಜಯ್ ಮಲ್ಯ ಹರಿಹಾಯ್ದಿದ್ದಾರೆ.
“ನಾನೊಬ್ಬ ಬ್ಯಾಂಕ್‌ಗಳ ಹಣವನ್ನು ಕದ್ದು ಓಡಿಹೋಗಿರುವ ಕಳ್ಳ ಎಂದು ಸಾಬೀತುಪಡಿಸಲು ಎಷ್ಟೆಲ್ಲ ಪ್ರಯತ್ನ ಮಾಡಲಾಗುತ್ತಿದೆ. ಹಿಂದೆ ಹಾಗೂ ಇತ್ತೀಚೆಗೆ ನಡೆದ ಮಾರಾಟದಲ್ಲೂ ಬ್ಯಾಂಕ್‌ಗಳು ನನ್ನ ವಿಷಯದಲ್ಲಿ ಸಾಕಷ್ಟು ಹಣವನ್ನು ಮರುಪಡೆದುಕೊಂಡಿದೆ. ಅದನ್ನು ನನ್ನ ಪರಿಹಾರ ಪ್ರಸ್ತಾವನೆಯಲ್ಲೂ ಸೇರಿಸಲಾಗಿದೆ. ಆದರೆ ನೀನೇನು ಮಾಡಿದರೂ ತಪ್ಪು, ಮಾಡದಿದ್ದರೂ ತಪ್ಪು ಎಂಬಂತೆ ನನ್ನನ್ನು ನಡೆಸಿಕೊಳ್ಳಲಾಗುತ್ತಿದೆ” ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.
ಯುಬಿಎಚ್‌ಎಲ್‌ನಲ್ಲಿ ಮಲ್ಯ ಹೊಂದಿದ್ದ 74,04,932 ಶೇರುಗಳನ್ನು ಬೆಂಗಳೂರು ಮೂಲದ ಸಾಲ ಮರುಗಳಿಕೆ ನ್ಯಾಯಾಧೀಕರಣ 1,008 ಕೋಟಿ ರೂ.ಗೆ ಮಾರಾಟ ಮಾಡಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ತಿಳಿಸಿತ್ತು.
ಯಸ್ ಬ್ಯಾಂಕ್‌ನಲ್ಲಿ ಪಡೆದ ಸಾಲವನ್ನು ಮರುಪಾವತಿಸದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಮಲ್ಯಾ ವಿರುದ್ಧ ದಾಖಲಿಸಿದ ಹಣ ವಂಚನೆ ಪ್ರಕರಣದ ಭಾಗವಾಗಿ ಜಪ್ತಿ ಮಾಡಲಾಗಿದ್ದ ಶೇರುಗಳನ್ನು ನ್ಯಾಯಾಧೀರಕಣಕ್ಕೆ ಒಪ್ಪಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಬ್ಯಾಂಕ್‌ಗೆ ಸೂಚಿಸಿತ್ತು.
ಈ ಪ್ರಕರಣಲ್ಲಿ ಇದೇ ಮೊದಲ ಬಾರಿ ಶೇರುಗಳನ್ನು ಮಾರಾಟ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಶೇರುಗಳನ್ನು ಮಾರಾಟ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಸ್ಥಗಿತಗೊಂಡಿರುವ ವೈಮಾನಿಕ ಸಂಸ್ಥೆಗೆ ಸಾಲ ನೀಡಿದ 17 ಬ್ಯಾಂಕ್‌ಗಳ ಸಮೂಹ ದಾಖಲಿಸಿದ ದೂರಿನ ಆಧಾರದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮಲ್ಯಾ ವಿರುದ್ಧ ತನಿಖೆ ನಡೆಸುತ್ತಿದೆ.