×
Ad

ದಾಬೋಲ್ಕರ್, ಪನ್ಸಾರೆ ಪ್ರಕರಣದ ನಿಧಾನ ತನಿಖೆ: ಫಡ್ನವೀಸ್ ಗೆ ಹೈಕೋರ್ಟ್ ತರಾಟೆ

Update: 2019-03-28 21:45 IST

ಮುಂಬೈ,ಮಾ.28: ಪ್ರಗತಿಪರ ಚಿಂತಕರಾದ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆಯವರ ಹತ್ಯೆ ಪ್ರಕರಣದ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಬಾಂಬೆ ಉಚ್ಚ ನ್ಯಾಯಾಲಯ, ಪ್ರತಿಯೊಂದು ತನಿಖೆಯಲ್ಲೂ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಾಗಿರುವುದು ನಾಚಿಕೆಗೇಡು ಎಂದು ಕಿಡಿಕಾರಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಗತಿಪರ ಚಿಂತಕರಾದ ದಾಬೋಲ್ಕರ್ ಮತ್ತು ಪನ್ಸಾರೆಯವರ ಹತ್ಯೆ ಪ್ರಕರಣದ ತನಿಖೆಯ ಬಗ್ಗೆ ಪರಿಶೀಲನೆ ನಡೆಸಲಾಗದಿರುವಷ್ಟು ವ್ಯಸ್ತವಾಗಿದ್ದಾರೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಕೇಂದ್ರ ತನಿಖಾ ಮಂಡಳಿ (ಸಿಬಿಐ) ದಾಬೋಲ್ಕರ್ ಪ್ರಕರಣದ ತನಿಖೆ ನಡೆಸುತ್ತಿದ್ದರೆ ರಾಜ್ಯ ಅಪರಾಧ ತನಿಖಾ ಇಲಾಖೆ ಪನ್ಸರೆ ಪ್ರಕರಣದ ತನಿಖೆ ನಡೆಸುತ್ತಿದೆ. ದಾಬೋಲ್ಕರ್ ಅವರನ್ನು ಆಗಸ್ಟ್ 2013ರಲ್ಲಿ ಪುಣೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದ್ದರೆ ಪನ್ಸಾರೆಯವರನ್ನು ಕೋಲ್ಹಾಪುರದ ಅವರ ನಿವಾಸದ ಬಳಿ 2015ರ ಫೆಬ್ರವರಿ 16ರಂದು ಇಬ್ಬರು ಆಗಂತುಕರು ಗುಂಡಿಟ್ಟು ಹತ್ಯೆ ಮಾಡಿದ್ದರು.

“ಮುಖ್ಯಮಂತ್ರಿ ಏನು ಮಾಡುತ್ತಿದ್ದಾರೆ? ಅವರು 11 ಖಾತೆಗಳನ್ನು ತನ್ನ ಬಳಿ ಇರಿಸಿಕೊಂಡಿದ್ದಾರೆ. ಅದರಲ್ಲಿ ಗೃಹಖಾತೆಯೂ ಸೇರಿದೆ. ಆದರೆ ಈ ಪ್ರಕರಣಗಳ ಬಗ್ಗೆ ತಿಳಿಯಲು ಅವರಿಗೆ ಸಮಯ ಸಿಗುತ್ತಿಲ್ಲ. ಅವರ ಸಹಾಯಕರಿಗೂ ತನಿಖೆ ನಡೆಸಲು ಇರುವ ತಡೆಗಳನ್ನು ತೆಗೆದು ಹಾಕಲು ಸಮಯವಿಲ್ಲ” ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತನಿಖೆಯ ಪ್ರಗತಿ ಬಗ್ಗೆ ತಿಳಿಸಿದ ಸಿಐಡಿ, ಪನ್ಸಾರೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ ಘೋಷಣೆ ಮಾಡಲಾಗಿದ್ದ 10 ಲಕ್ಷ ರೂ. ಬಹುಮಾನವನ್ನು 50 ಲಕ್ಷ ರೂ.ಗೆ ಏರಿಸಲಾಗಿದೆ ಎಂದು ತಿಳಿಸಿದೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, “ನಿಮ್ಮ ಹೇಳಿಕೆಯಿಂದ ನಮಗೆ ಸಮಾಧಾನವಾಗಿಲ್ಲ. ನೀವು ನೀಡುವ ಹಣಕ್ಕೋಸ್ಕರ ಜನರು ಮುಂದೆ ಬಂದು ಅಪರಾಧಿಗಳ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಭಾವಿಸಿದ್ದೀರಾ? ಈ ವಿಷಯದಲ್ಲಿ ಬಾಯಿ ಮುಚ್ಚಿಕೊಂಡಿರಲು ಅವರು ಅದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಪಡೆಯುತ್ತಿರಬಹುದು ಎನ್ನುವುದು ನಿಮಗೆಲ್ಲ ತಿಳಿದಿರಲಿ” ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News