×
Ad

ಹೊಸ ಉದ್ಯಮಗಳಿಗೆ 3 ವರ್ಷಗಳ ಕಾಲ ಅನುಮತಿ ಬೇಕಿಲ್ಲ, ಏಂಜೆಲ್ ಟ್ಯಾಕ್ಸ್ ರದ್ದು

Update: 2019-03-28 22:35 IST

ಹೊಸದಿಲ್ಲಿ,ಮಾ.28: ತನ್ನ ಪಕ್ಷವು ಅಧಿಕಾರಕ್ಕೆ ಬಂದರೆ ಹೊಸ ಉದ್ಯಮಗಳು ಮೂರು ವರ್ಷಗಳ ಕಾಲ ಯಾವುದೇ ಅನುಮತಿಯನ್ನು ಪಡೆಯಬೇಕಿಲ್ಲ ಮತ್ತು ಅವುಗಳಿಗೆ ಬ್ಯಾಂಕ್ ಸಾಲ ಸುಲಭದಲ್ಲಿ ಲಭ್ಯವಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿದ ಅವರು, ನವೋದ್ಯಮಗಳ ಮೇಲೆ ಈಗ ವಿಧಿಸಲಾಗಿರುವ ಏಂಜೆಲ್ ತೆರಿಗೆಯನ್ನು ರದ್ದು ಮಾಡುವುದಾಗಿಯೂ ಭರವಸೆ ನೀಡಿದರು. ನವೋದ್ಯಮಗಳಲ್ಲಿ ಹೂಡಿಕೆಗಳ ಮೇಲೆ ಶೇ.30ರಷ್ಟು ಗರಿಷ್ಠ ದರದಲ್ಲಿ ಏಂಜೆಲ್ ತೆರಿಗೆಯನ್ನು ವಿಧಿಸಲಾಗುತ್ತಿದೆ.

ದೇಶಿಯ ಉದ್ಯಮಗಳಿಗೆ ಉತ್ತೇಜನ ಕಾಂಗ್ರೆಸ್‌ನ ಪ್ರಮುಖ ಆದ್ಯತೆಯಾಗಿರಲಿದೆ ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು ಎಲ್ಲ ಹೊಸ ಉದ್ಯಮಗಳು ಕೆಂಪು ಪಟ್ಟಿಯ ಹಿಡಿತಗಳಿಂದ ಮುಕ್ತವಾಗಿರುವಂತೆ ಅದು ನೋಡಿಕೊಳ್ಳಲಿದೆ. ಹೊಸ ಉದ್ಯಮಗಳು ಮೊದಲ ಮೂರು ವರ್ಷಗಳ ಕಾಲ ಯಾವುದೇ ಅನುಮತಿಯನ್ನು ಪಡೆದುಕೊಳ್ಳಬೇಕಿಲ್ಲ ಎಂದರು.

ಈ ಪ್ರಸ್ತಾವಗಳನ್ನು ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಕಾಂಗ್ರೆಸ್‌ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದ ರಾಹುಲ್,ತಾನು ಹಲವಾರು ಉದ್ಯಮಿಗಳೊಂದಿಗೆ ಚರ್ಚೆಗಳನ್ನು ನಡೆಸಿದ ಸಂದರ್ಭ ತಮ್ಮ ಉದ್ಯಮಗಳನ್ನು ಆರಂಭಿಸುವ ಮೊದಲು ವಿವಿಧ ಏಜೆನ್ಸಿಗಳಿಂದ ಎಲ್ಲ ಬಗೆಯ ಅನುಮತಿಗಳನ್ನು ಪಡೆದುಕೊಳ್ಳುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ನೋವು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಈ ಶಕ್ತಿಶಾಲಿ ಪ್ರಸ್ತಾವವನ್ನು ತಂದಿದೆ ಎಂದರು.

ಯುವ ಉದ್ಯಮಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಆರಂಭ ಮತ್ತು ಅವರಿಗೆ ಸಾಲ ಲಭ್ಯವಾಗಿಸುವಿಕೆಯ ಕಲ್ಪನೆಯೂ ಉದ್ಯಮಿಗಳೊಂದಿಗೆ ಚರ್ಚೆ ವೇಳೆ ಮೂಡಿಬಂದಿದೆ ಎಂದ ಅವರು,ನೀರವ್ ಮೋದಿ ಮಾತ್ರ ಏಕೆ ಕೋಟ್ಯಂತರ ರೂ.ಗಳನ್ನು ಪಡೆಯಬೇಕು?, ಆತ ಭಾರತದಲ್ಲೆಷ್ಟು ಉದ್ಯೋಗಗಳನ್ನು ಸೃಷ್ಟಿಸಿದ್ದಾನೆ? ಭಾರತಕ್ಕೆ 2,000 ಉದ್ಯೋಗಗಳನ್ನು ನೀಡಲು ಬಯಸುವ ಯುವ ಉದ್ಯಮಿಗೇಕೆ ಬ್ಯಾಂಕ್ ಸಾಲ ದೊರೆಯುತ್ತಿಲ್ಲ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News