ಕಾಶ್ಮೀರ ಪ್ರತ್ಯೇಕ ರಾಷ್ಟ್ರವೆಂದು ಉಲ್ಲೇಖಿಸಿದ ಫೇಸ್‌ಬುಕ್: ಕ್ಷಮೆ ಯಾಚನೆ

Update: 2019-03-28 17:16 GMT

ಹೊಸದಿಲ್ಲಿ, ಮಾ.28: ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವೆಂದು ಉಲ್ಲೇಖಿಸಿರುವುದಕ್ಕೆ ಫೇಸ್‌ಬುಕ್ ಬುಧವಾರ ಕ್ಷಮೆ ಯಾಚಿಸಿದ್ದು ಈ ತಪ್ಪನ್ನು ಸರಿಪಡಿಸಿರುವುದಾಗಿ ತಿಳಿಸಿದೆ.

ಇರಾನ್‌ನ ಜಾಲಬಂಧ (ನೆಟ್‌ವರ್ಕ್)ದ ಪರಿಣಾಮಕ್ಕೆ ಒಳಗಾಗಿರುವ ರಾಷ್ಟ್ರ ಹಾಗೂ ಪ್ರದೇಶಗಳ ಪಟ್ಟಿಯಲ್ಲಿ ಈಜಿಪ್ಟ್, ಭಾರತ, ಇಂಡೋನೇಶಿಯಾದ ಜೊತೆಗೆ ಕಾಶ್ಮೀರದ ಹೆಸರನ್ನೂ ತಪ್ಪಾಗಿ ಸೇರಿಸಲಾಗಿದೆ. ಇದನ್ನು ತಕ್ಷಣ ಸರಿಪಡಿಸಲಾಗಿದ್ದು, ಇದರಿಂದ ಉಂಟಾಗಿರುವ ಗೊಂದಲಕ್ಕಾಗಿ ಕ್ಷಮೆ ಯಾಚಿಸುತ್ತೇವೆ ಎಂದು ಫೇಸ್‌ಬುಕ್ ಹೇಳಿಕೆ ತಿಳಿಸಿದೆ.

ಇರಾನ್‌ನೊಂದಿಗೆ ಸಂಪರ್ಕಿಸಲಾಗಿರುವ ಬಹು ನೆಟ್‌ವರ್ಕ್‌ನ 513 ಪುಟಗಳು, ತಂಡಗಳು, ಖಾತೆಗಳನ್ನು ಸಂಘಟಿತ ಅಪ್ರಾಮಾಣಿಕ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಈ ಖಾತೆಗಳು ನಿರಂತರವಾಗಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿವೆ ಹಾಗೂ ನೈಜ ರಾಜಕೀಯ ಸಂಘಟನೆ ಹಾಗೂ ಮಾಧ್ಯಮ ಸಂಸ್ಥೆಗಳೆಂದು ಸೋಗು ಹಾಕುತ್ತಿವೆ . ಇರಾನ್ ವಿರುದ್ಧದ ಆರ್ಥಿಕ ನಿಬರ್ಂಧ, ಭಾರತ- ಪಾಕ್ ನಡುವಿನ ಉದ್ವಿಗ್ನತೆ, ಸಿರಿಯಾ ಮತ್ತು ಯೆಮೆನ್‌ನ ಸಂಘರ್ಷ, ಭಯೋತ್ಪಾದನೆ, ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಉದ್ವಿಗ್ನತೆ, ಇಸ್ಲಾಮ್‌ನ ಧಾರ್ಮಿಕ ವಿಷಯಗಳು, ಭಾರತದ ರಾಜಕೀಯ ವಿಷಯ ಇತ್ಯಾದಿಗಳ ಕುರಿತು ಇರಾನ್‌ನ ಸರಕಾರಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಷಯಗಳನ್ನು ವೈಭವೀಕರಿಸಿ ಮರುಪ್ರಸಾರ ಮಾಡುತ್ತಿವೆ ಎಂದು ಫೇಸ್‌ಬುಕ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News