ಕಿರಣ್ ಬೇಡಿ ಹೆಣ್ಣೋ, ಗಂಡೋ ಗೊತ್ತಿಲ್ಲ: ತಮಿಳು ರಾಜಕೀಯ ಭಾಷಣಕಾರನಿಂದ ವಿವಾದ

Update: 2019-03-28 17:33 GMT

ಪುದುಚೆರಿ,ಮಾ.28: ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹೆಣ್ಣೋ ಅಥವಾ ಗಂಡೋ ಎಂದು ನಮಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ತಮಿಳು ರಾಜಕೀಯ ಭಾಷಣಕಾರ ನಂಜಿಲ್ ಸಂಪತ್ ವಿವಾದಕ್ಕೀಡಾಗಿದ್ದಾರೆ. ಬೇಡಿಯನ್ನು ದಿಲ್ಲಿಯಲ್ಲಿ ಪಳಗಿಸಿ ಪುದುಚೇರಿಗೆ ಕಳುಹಿಸಲಾಗಿದೆ ಎಂದು ಸಂಪತ್ ವ್ಯಂಗ್ಯವಾಡಿದ್ದಾರೆ ಎಂದು ಆಂಗ್ಲ ಸುದ್ದಿ ಜಾಲತಾಣ ವರದಿ ಮಾಡಿದೆ.

ಸಂಪತ್ ಪುದುಚೆರಿಯ ಕಾಂಗ್ರೆಸ್ ಅಭ್ಯರ್ಥಿ ವಿ.ವೈತಿಲಿಂಗಮ್ ಪರ ಪ್ರಚಾರ ನಡೆಸುವ ವೇಳೆ ಈ ಮಾತುಗಳನ್ನು ಆಡಿದ್ದಾರೆ ಎಂದು ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.

ರಾಜ್ಯಗಳಿಗೆ ರಾಜ್ಯಪಾಲರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಸಂವಿಧಾನೇತರ ಹಕ್ಕನ್ನು ಚಲಾಯಿಸುತ್ತಿದೆ ಎಂದು ಆರೋಪಿಸುವ ವೇಳೆ ಸಂಪತ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾಷಣದ ಆರಂಭದಲ್ಲಿ ಕಿರಣ್ ಬೇಡಿಯನ್ನು ನೀರವ್ ಮೋದಿ ಎಂದು ಸಂಪತ್ ಸಂಬೋಧಿಸುತ್ತಿದ್ದು ನಂತರ ಅವರ ಹಿಂದೆ ನಿಂತಿದ್ದ ವ್ಯಕ್ತಿ ಸರಿಪಡಿಸಿದ ನಂತರ ಸಂಪತ್ ತನ್ನ ತಪ್ಪನ್ನು ಸರಿಪಡಿಸಿದರು ಎಂದು ವರದಿ ತಿಳಿಸಿದೆ.

“ಭಾರತದ 21 ರಾಜ್ಯಗಳಲ್ಲಿ ಬಿಜೆಪಿಯ ರಾಜ್ಯಪಾಲರಿದ್ದಾರೆ. ಇಲ್ಲೊಬ್ಬ ಮಹಿಳೆಯಿದ್ದಾರೆ, ನೀರವ್ ಮೋದಿ, ಆಕೆ ಹೆಣ್ಣೋ ಗಂಡೋ ನಮಗೆ ತಿಳಿದಿಲ್ಲ” ಎಂದು ಸಂಪತ್ ಹೇಳಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು “ಅದು ನೀರವ್ ಮೋದಿ ಅಲ್ಲ ಕಿರಣ್ ಬೇಡಿ” ಎಂದು ಸಂಪತ್‌ರನ್ನು ಸರಿಪಡಿಸಿದ್ದಾರೆ.

“ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿಯ ಕೆಲಸಕ್ಕೆ ಅಡ್ಡಿಪಡಿಸುವುದೇ ರಾಜ್ಯಪಾಲರ ಕೆಲಸವೇ?, ತಮಿಳು ನಾಡಿಗೆ ಬನ್ವಾರಿಲಾಲ್ ಪುರೋಹಿತ್ ರಾಜ್ಯಪಾಲರಾಗಿದ್ದರೆ ಪುದುಚೇರಿಗೆ ಕಿರಣ್ ಬೇಡಿ ರಾಜ್ಯಪಾಲರಾಗಿದ್ದಾರೆ. 21 ರಾಜ್ಯಗಳಲ್ಲಿ ಸಂವಿಧಾನೇತರ ಹಕ್ಕು ಸಾಧಿಸಲಾಗಿದೆ. ಇದು ನ್ಯಾಯವೇ” ಎಂದು ಸಂಪತ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News