ಮೋದಿ ನೀತಿ ಅಮಾನ್ಯಗೊಳಿಸಿರುವುದನ್ನು ‘ನ್ಯಾಯ್’ ಮರು ಮಾನ್ಯಗೊಳಿಸಲಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ, ಮಾ. 28: ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳಿಂದ ಅಮಾನ್ಯಗೊಂಡಿರುವ ದೇಶದ ಆರ್ಥಿಕತೆಯನ್ನು ಪಕ್ಷದ ಕನಿಷ್ಠ ಆದಾಯ ಖಾತರಿ ಯೋಜನೆ ಪುನರ್ ಮಾನ್ಯಗೊಳಿಸಲಿದೆ ಎಂದು ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಇದು ಈ ಯೋಜನೆಯ ಒಂದು ಉದ್ದೇಶ. ಇನ್ನೊಂದು ಉದ್ದೇಶ ದೇಶದ ಶೇ. 20 ಬಡ ಕುಟುಂಬಗಳಿಗೆ ಹಣಕಾಸಿನ ನೆರವು ನೀಡುವುದು ಎಂದು ಅವರು ಹೇಳಿದರು. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಾಧನೆ ವಿಫಲ ನೀತಿಯ ಮೂಲಕ ಆರ್ಥಿಕತೆಯಿಂದ ನಗದು ನಿಷೇಧಿಸಿರುವುದು ಹಾಗೂ ದುರ್ಬಲ ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್‌ಟಿ) ಅಸ್ತಿತ್ವಕ್ಕೆ ತಂದಿರುವುದು. ಇದರಿಂದ ಅಸಂಘಟಿತ ಕ್ಷೇತ್ರ ತೀವ್ರ ತೊಂದರೆಗೆ ಒಳಗಾಗಿದೆ ಎಂದು ಅವರು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ದೇಶದ ಶೇ. 20 ಬಡ ಕುಟುಂಬಗಳಿಗೆ ವಾರ್ಷಿಕ 72,000 ರೂಪಾಯಿ ಆದಾಯ ಬೆಂಬಲ ನೀಡಲಾಗುವುದು ಎಂದು ಕಳೆದ ಮಂಗಳವಾರ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಈ ಯೋಜನೆಗೆ ನ್ಯಾಯ್ (ನ್ಯೂಂತಮಾ ಆಯ್ ಯೋಜನ) ಎಂದು ಹೆಸರು ಇರಿಸಲಾಗಿದೆ. ಯಾಕೆಂದರೆ, ಇದು ಬಡವರಿಗೆ ನ್ಯಾಯ ನೀಡಲಿದೆ. ಅವರು (ನರೇಂದ್ರ ಮೋದಿ) ರೈತರಿಂದ ಕಸಿದುಕೊಂಡರು, ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳಿಂದ ಕಸಿದುಕೊಂಡರು ಹಾಗೂ ಯುವಕರಿಂದ ಉದ್ಯೋಗಗಳನ್ನು ಕಸಿದಕೊಂಡರು. ದೇಶದ ತಾಯಂದಿರ ಹಾಗೂ ಸಹೋದರಿಯರ ಉಳಿತಾಯ ನಾಶ ಮಾಡಿದರು. ಮೋದಿ ಅವರು ಏನನ್ನು ಕಸಿದುಕೊಂಡಿರುವರೊ ಅದನ್ನು ಭಾರತದ ವಂಚಿತ ಸಮುದಾಯಕ್ಕೆ ಹಿಂದಿರುಗಿಸಲು ನಾನು ಬಯಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ಆರಂಭದಲ್ಲಿ ಈ ಯೋಜನೆಯ ಅನುಷ್ಠಾನ ಪ್ರಕ್ರಿಯೆಯಲ್ಲಿ ಯಾವುದಾದರೂ ಲೋಪದೋಷಗಳು ಇವೆಯೇ ಎಂದು ಪರಿಶೀಲಿಸಲು ಪ್ರಾಯೋಗಿಕ ನೆಲೆಯಲ್ಲಿ ಜಾರಿಗೊಳಿಸಲಿದ್ದೇವೆ. ಅನಂತರ ದೇಶಾದ್ಯಂತ ಅಧಿಕೃತವಾಗಿ ಅನುಷ್ಠಾನಗೊಳಿಸಲಿದ್ದೇವೆ. ಯಾವುದೇ ಅರ್ಹ ಕುಟುಂಬಗಳು ಯೋಜನೆಯಿಂದ ಹೊರಗುಳಿ ಯದಂತೆ ಫಲಾನುಭವಿಗಳನ್ನು ಗುರುತಿಸಲು ಸಮರ್ಪಕ ಮಾನದಂಡ ಗಳನ್ನು ಬಳಸಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.