ದಾಳಿ ನಡೆದ ತಿಂಗಳ ಬಳಿಕ ಪತ್ರಕರ್ತರ ತಂಡವನ್ನು ಬಾಲಕೋಟ್‌ಗೆ ಕರೆದೊಯ್ದ ಪಾಕ್ ಸೇನೆ
ಹೊಸದಿಲ್ಲಿ, ಮಾ.29: ಬಾಲಕೋಟ್‌ನಲ್ಲಿ ಜೈಶ್ ಮುಹಮ್ಮದ್ ಸಂಘಟನೆಯ ತರಬೇತಿ ಶಿಬಿರದ ಮೇಲೆ ಭಾರತದ ವಾಯುಪಡೆ ವಿಮಾನಗಳು ದಾಳಿ ನಡೆಸಿದ ಒಂದು ತಿಂಗಳ ಬಳಿಕ ಪಾಕಿಸ್ತಾನದ ಸೇನಾಪಡೆ ಪತ್ರಕರ್ತರ ತಂಡವೊಂದನ್ನು ಆ ಪ್ರದೇಶಕ್ಕೆ ಕರೆದೊಯ್ದಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಬಾಲಕೋಟ್ ಪ್ರದೇಶದಲ್ಲಿರುವ ಜೆಇಎಂ ಮದರಸದಲ್ಲಿ ಈಗಲೂ 300 ಮಕ್ಕಳು ಇದ್ದಾರೆ ಹಾಗೂ ಅಲ್ಲಿಗೆ ತೆರಳಿದ್ದ ಪತ್ರಕರ್ತರು ಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಮಾತಾಡಿರುವುದನ್ನು ವೀಡಿಯೊ ಚಿತ್ರೀಕರಣ ನಡೆಸಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಪ್ರದೇಶದ ಭದ್ರತಾ ವ್ಯವಸ್ಥೆಯ ಹೊಣೆಯನ್ನು ಪಾಕಿಸ್ತಾನ ಸೇನಾಪಡೆಯ ಫ್ರಾಂಟಿಯರ್ ವಿಭಾಗ ವಹಿಸಿದೆ ಎಂದು ವರದಿಯಾಗಿದೆ.
ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಭಯೋತ್ಪಾದಕರು ನಡೆಸಿದ್ದ ಆತ್ಮಾಹುತಿ ದಾಳಿಯ ಸೂತ್ರಧಾರ ಜೈಶ್ ಮುಹಮ್ಮದ್ ಸಂಘಟನೆ ಎಂದು ಭಾರತ ಹೇಳುತ್ತಿದ್ದರೆ, ಪಾಕಿಸ್ತಾನ ಇದನ್ನು ನಿರಾಕರಿಸಿದೆ.
ಭಾರತದ ವಾಯುಪಡೆ ಬಾಲಾಕೋಟ್‌ನ ಮೇಲೆ ದಾಳಿ ನಡೆಸಿದ ಸ್ಥಳದಲ್ಲಿ ಯಾವುದೇ ಉಗ್ರರ ತರಬೇತಿ ಶಿಬಿರಗಳಿಲ್ಲ ಎಂದು ಪಾಕಿಸ್ತಾನ ಹಲವು ಬಾರಿ ಹೇಳಿಕೆ ನೀಡಿದೆ. ಅಲ್ಲದೆ ತನ್ನ ತನಿಖಾ ತಂಡ ಬಂಧಿಸಿರುವ 54 ಮಂದಿಗೂ ಪುಲ್ವಾಮ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಪಾಕಿಸ್ತಾನದ ವಿದೇಶ ವ್ಯವಹಾರ ಸಚಿವಾಲಯ ಹೇಳಿಕೆ ನೀಡಿದೆ.