ಕರ್ತಾರ್‌ಪುರ ಸಮಿತಿಯಲ್ಲಿ ಖಾಲಿಸ್ತಾನ್‌ವಾದಿ: ಪಾಕ್ ಜೊತೆಗಿನ ಸಭೆ ರದ್ದುಗೊಳಿಸಿದ ಭಾರತ

Update: 2019-03-29 15:12 GMT

ಹೊಸದಿಲ್ಲಿ, ಮಾ.29: ಕರ್ತಾರ್‌ಪುರ ಕಾರಿಡಾರ್ ಕುರಿತು ಭಾರತದೊಂದಿಗೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವ ಪಾಕಿಸ್ತಾನದ ಸಮಿತಿಯಲ್ಲಿ ಖಾಲಿಸ್ತಾನ್‌ವಾದಿಯನ್ನು ಸೇರಿಸಿರುವುದನ್ನು ಆಕ್ಷೇಪಿಸಿರುವ ಭಾರತ, ಪಾಕಿಸ್ತಾನ ರಾಯಭಾರಿಯನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆ ಸಲ್ಲಿಸಿದೆ.

 ಅಲ್ಲದೆ, ಕರ್ತಾರ್‌ಪುರ ಕಾರಿಡಾರ್‌ಗೆ ಸಂಬಂಧಿಸಿದ ವಿಧಾನಗಳನ್ನು ಚರ್ಚಿಸಲು ಎಪ್ರಿಲ್ 2ರಂದು ವಾಘಾ ಗಡಿಯಲ್ಲಿ ಪಾಕಿಸ್ತಾನದೊಂದಿಗೆ ನಡೆಯಬೇಕಿದ್ದ ಸಭೆಯನ್ನು ಭಾರತ ರದ್ದುಗೊಳಿಸಿದೆ. ಪಾಕಿಸ್ತಾನದ ಉದ್ದೇಶವನ್ನು ಪ್ರಶ್ನಿಸಿರುವ ವಿದೇಶ ವ್ಯವಹಾರ ಸಚಿವಾಲಯವು, ಖಾಲಿಸ್ತಾನಿ ಮುಖಂಡ ಮಣೀಂದರ್ ಸಿಂಗ್ ತಾರಾ, ಲಷ್ಕರೆ ತಯ್ಯಬ ಸಂಘಟನೆಯ ಮುಖಂಡನಿಗೆ ನಿಕಟವರ್ತಿ ಎನ್ನಲಾಗಿರುವ ಗೋಪಾಲ್ ಸಿಂಗ್ ಚಾವ್ಲಾರನ್ನು ಸಮಿತಿಯಲ್ಲಿ ಸೇರಿಸಿಕೊಂಡಿರುವುದು ಅಸಮಂಜಸವಾಗಿದೆ ಎಂದಿದೆ.

ಕರ್ತಾರ್‌ಪುರ ಕಾರ್ಯಕ್ರಮವನ್ನು ಭಾರತ ವಿರೋಧಿ ಪ್ರಚಾರಕ್ಕೆ ಬಳಸಬಾರದು ಎಂದು ಸರಕಾರ ತಿಳಿಸಿದೆ. ಕರ್ತಾರ್‌ಪುರ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಪ್ರಯಾಣದ ಹಿನ್ನೆಲೆಯಲ್ಲಿ, ಎರಡು ದೇಶಗಳ ನಡುವಿನ ವಾಸ್ತವಿಕ ಅಂತರವನ್ನು ಹೇಗೆ ಜೋಡಿಸಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸುವಂತೆ ಮತ್ತು ಅಟ್ಟಾರಿಯಲ್ಲಿ ಕಳೆದ ಬಾರಿ ನಡೆದ ಸಭೆಯಲ್ಲಿ ಮುಂದಿರಿಸಲಾದ ಪ್ರಮುಖ ಪ್ರಸ್ತಾವನೆಗಳ ಕುರಿತು ಅಭಿಪ್ರಾಯ ತಿಳಿಸುವಂತೆ ಭಾರತ ತಿಳಿಸಿದೆ. ಅಲ್ಲದೆ ಎಪ್ರಿಲ್ ಮಧ್ಯಭಾಗದಲ್ಲಿ ತಾಂತ್ರಿಕ ಪರಿಣತರ ಮತ್ತೊಂದು ಸಭೆ ನಡೆಸಲೂ ಭಾರತದ ವಿದೇಶ ವ್ಯವಹಾರ ಇಲಾಖೆ ಸಲಹೆ ನೀಡಿದೆ.

ಎಪ್ರಿಲ್ 2ರ ಸಭೆ ರದ್ದುಗೊಳಿಸುವ ಭಾರತದ ನಿರ್ಧಾರದ ಬಗ್ಗೆ ವಿಷಾದವಿದೆ. ಪಾಕಿಸ್ತಾನದ ಅಭಿಪ್ರಾಯವನ್ನೂ ಕೇಳದೆ ಕಡೆಯ ಕ್ಷಣದಲ್ಲಿ ಸಭೆ ಮುಂದೂಡಿರುವುದು ಅಸಂಬದ್ಧವಾಗಿದೆ ಎಂದು ಪಾಕಿಸ್ತಾನ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News