‘ಹಿಂದು ಭಯೋತ್ಪಾದನೆ’ ಸಿದ್ಧಾಂತವನ್ನು ಹುಟ್ಟುಹಾಕಿದ್ದಕ್ಕಾಗಿ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು: ಅರುಣ್ ಜೇಟ್ಲಿ ಆಗ್ರಹ

Update: 2019-03-29 15:47 GMT

ಹೊಸದಿಲ್ಲಿ, ಮಾ.29: ಶುಕ್ರವಾರ ಕಾಂಗ್ರೆಸ್ ವಿರುದ್ಧ ತೀವ್ರ ದಾಳಿ ನಡೆಸಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ‘ಹಿಂದು ಭಯೋತ್ಪಾದನೆ’ಯ ಸಿದ್ಧಾಂತವನ್ನು ಹುಟ್ಟುಹಾಕಿದ್ದಕ್ಕಾಗಿ ಅದು ಹಿಂದು ಸಮುದಾಯದ ಕ್ಷಮೆಯನ್ನು ಯಾಚಿಸಬೇಕು ಎಂದು ಆಗ್ರಹಿಸಿದರು. ಕಳೆದ ವಾರ ಪ್ರಕರಣದಲ್ಲಿಯ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯವು ಪ್ರಾಸಿಕ್ಯೂಷನ್ ಸಾಕ್ಷಗಳು ದೋಷಪೂರ್ಣವಾಗಿದ್ದವು ಎಂದು ಹೇಳಿದ ಹಿನ್ನೆಲೆಯಲ್ಲಿ ಜೇಟ್ಲಿಯವರ ಈ ಹೇಳಿಕೆ ಹೊರಬಿದ್ದಿದೆ.

ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಜಗದೀಪ ಸಿಂಗ್ ಅವರ ಆದೇಶವನ್ನು ಗುರುವಾರ ಬಹಿರಂಗಗೊಳಿಸಲಾಗಿದ್ದು,‘‘ವಿಶ್ವಾಸಾರ್ಹ ಮತ್ತು ಅಂಗೀಕಾರಾರ್ಹ ಸಾಕ್ಷಾಧಾರಗಳ ಕೊರತೆಯಿಂದಾಗಿ ಹಿಂಸೆಯ ಹೇಡಿ ಕೃತ್ಯವೊಂದು ಶಿಕ್ಷೆಗೊಳಗಾಗುವುದರಿಂದ ನುಣುಚಿಕೊಂಡಿರುವುದರಿಂದ ತೀವ್ರ ನೋವು ಮತ್ತು ವ್ಯಥೆಯೊಂದಿಗೆ ನನ್ನ ತೀರ್ಪನ್ನು ಪ್ರಕಟಿಸುವಂತಾಗಿದೆ ’’ಎಂದು ಹೇಳಿದ್ದರು. ಪ್ರಾಸಿಕ್ಯೂಷನ್ ಸಾಕ್ಷಗಳಲ್ಲಿ ಭಾರಿ ಲೋಪಗಳಿವೆ ಮತ್ತು ಭಯೋತ್ಪಾದಕ ಕೃತ್ಯವೊಂದು ಭೇದಿಸಲಾಗದೆ ಉಳಿದುಕೊಂಡಿದೆ ಎಂದಿದ್ದರು.

ಸ್ವಾಮಿ ಅಸೀಮಾನಂದ,ಲೋಕೇಶ ಶರ್ಮಾ,ಕಮಲ್ ಚೌಹಾಣ್ ಮತ್ತು ರಾಜಿಂದರ್ ಚೌಧರಿ ಅವರನ್ನು ನ್ಯಾಯಾಲಯವು ಮಾ.20ರಂದು ದೋಷಮುಕ್ತರನ್ನಾಗಿಸಿತ್ತು. 2007, ಫೆ.18ರಂದು ಭಾರತ-ಪಾಕಿಸ್ತಾನ್ ನಡುವಿನ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ 10 ಭಾರತೀಯರು ಸೇರಿದಂತೆ 68 ಜನರು ಸಾವನ್ನಪ್ಪಿದ್ದರು. ಸ್ಫೋಟವು ಪಾಕಿಸ್ತಾನಿ ಪ್ರಜೆಗಳನ್ನು ಗುರಿಯಾಗಿಸಿಕೊಂಡಿತ್ತು ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ತಿಳಿಸಿತ್ತು.

ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭಗಳಿಕೆಗಾಗಿ ಹಿಂದು ಭಯೋತ್ಪಾದನೆಯ ಸುಳ್ಳು ಸಿದ್ಧಾಂತವನ್ನು ತೇಲಿಬಿಟ್ಟಿತ್ತು ಮತ್ತು ಇಡೀ ಹಿಂದು ಸಮಾಜಕ್ಕೆ ಕಳಂಕವನ್ನುಂಟು ಮಾಡಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಜೇಟ್ಲಿ,ಇದಕ್ಕಾಗಿ ಅದು ಹಿಂದು ಸಮುದಾಯದ ಕ್ಷಮೆಯನ್ನು ಯಾಚಿಸಬೇಕು ಎಂದರು.

ಯುಪಿಎ ಮತ್ತು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಇಂತಹುದೇ ಸಿದ್ಧಾಂತವನ್ನು ಆಧರಿಸಿ 3-4 ಪ್ರಕರಣಗಳನ್ನು ದಾಖಲಿಸಲಾಗಿತ್ತು ಮತ್ತು ಎಲ್ಲ ಪ್ರಕರಣಗಳೂ ನ್ಯಾಯಾಲಯದಲ್ಲಿ ವಿಫಲಗೊಂಡಿದ್ದವು ಎಂದರು.

ಸಂಜೋತಾ ಪ್ರಕರಣದಲ್ಲಿ ‘ಸಾಕ್ಷಾಧಾರಗಳಿಲ್ಲದ ’ವಿಚಾರಣೆ ನಡೆದಿತ್ತು ಎನ್ನುವುದನ್ನು ನ್ಯಾಯಾಲಯದ ತೀರ್ಪು ಸ್ಪಷ್ಟಪಡಿಸಿದೆ. ಅಷ್ಟೊಂದು ಜನರು ಸಾವನ್ನಪ್ಪಿದ್ದರು.ಇದರ ಹೊಣೆಯನ್ನು ಯಾರು ಹೊರಬೇಕು? ಇದರ ಹೊಣೆಗಾರಿಕೆಯು ಯುಪಿಎ ನಾಯಕತ್ವದ್ದಾಗಿದೆ ಎಂದ ಜೇಟ್ಲಿ,ತನ್ನ ‘ಹಿಂದು ಭಯೋತ್ಪಾದನೆ’ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳಲು ಯುಪಿಎ ಸರಕಾರವು ತಪ್ಪು ವ್ಯಕ್ತಿಗಳನ್ನು ಬಂಧಿಸಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News