ವಾಯುಪಡೆಯ ಶೌರ್ಯಕ್ಕಿಂತ ಹೆಚ್ಚಾಗಿ ಅಭಿನಂದನ್ ಬಿಡುಗಡೆಗೆ ಕಾಳಜಿ ವಹಿಸಿದ್ದ ಪ್ರತಿಪಕ್ಷಗಳು: ಪ್ರಧಾನಿ ಮೋದಿ ವಾಗ್ದಾಳಿ

Update: 2019-03-29 15:54 GMT

ಹೊಸದಿಲ್ಲಿ, ಮಾ. 29: ಪಾಕಿಸ್ತಾನದಿಂದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಿಡುಗಡೆ ಹಾಗೂ ಬಾಲಕೋಟ್ ವಾಯುದಾಳಿ ಪ್ರಕರಣಗಳನ್ನು ಪ್ರತಿಪಕ್ಷಗಳು ರಾಜಕೀಕರಣಗೊಳಿಸಲು ಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತೀಯ ವಾಯುಪಡೆ ಪ್ರದರ್ಶಿಸಿದ್ದ ಶೌರ್ಯದ ಬದಲಿಗೆ ಅಭಿನಂದನ್‌ನ ಬಿಡುಗಡೆಯ ಬಗ್ಗೆ ಪ್ರತಿಪಕ್ಷಗಳು ಹೆಚ್ಚು ಮಹತ್ವ ನೀಡುತ್ತಿವೆಯೆಂದು ಅವರು ಕಟಕಿಯಾಡಿದ್ದಾರೆ.

‘‘ಅಭಿನಂದನ್ ಅವರ ಬಂಧನ ಪ್ರಕರಣ ನಡೆದ ಸಂದರ್ಭದಲ್ಲಿ, ಭಾರತದ ಪ್ರತಿಯೊಂದು ರಾಜಕೀಯ ಪಕ್ಷವೂ, ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ಪರಾಕ್ರಮದ ಬಗ್ಗೆ ತಾನು ಹೆಮ್ಮೆಪಡುವುದಾಗಿ ಹೇಳಬೇಕಿತ್ತು. ಅದರ ಬದಲಿಗೆ ಅವು ಅಭಿನಂದನ್ ಅವರ ಬಿಡುಗಡೆ ಹಾಗೂ ವಾಪಸಾತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದವು. ಇಡೀ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲಾಯಿತು’’ ಎಂದು ಮೋದಿ ಹೇಳಿದರು.

ಒಂದು ವೇಳೆ ಅಭಿನಂದನ್ ವರ್ಧಮಾನ್ ಅವರನ್ನು ಗಡಿಯಾಚೆಗೆ ಬಂಧಿಸಿಟ್ಟಿರುತ್ತಿದ್ದಲ್ಲಿ, ಸರಕಾರವು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸಿ ಅವರನ್ನು ಬಿಡುಗಡೆಗೊಳಿಸುತ್ತಿತ್ತು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಅಭಿನಂದನ್ ಅವರ ಬಿಡುಗಡೆಯನ್ನು ಘೋಷಿಸದೆ ಇರುತ್ತಿದ್ದಲ್ಲಿ, ಅಂದು ರಾತ್ರಿ ರಾಜಕೀಯ ಪಕ್ಷಗಳು ಮೊಂಬತ್ತಿ ಮೆರವಣಿಗೆಯನ್ನು ನಡೆಸುವ ಯೋಜನೆಯನ್ನು ಹೊಂದಿದ್ದವು ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News