ಉಗ್ರದಾಳಿ ನಡೆಸಲಿದ್ದಾನೆ ಎಂದು ಬಂಧಿಸಿದವನನ್ನು ಭಾರತಕ್ಕೆ ತರಿಸಿದ್ದೇ ಎನ್ಐ‌ಎ !

Update: 2019-03-29 15:55 GMT

ಹೊಸದಿಲ್ಲಿ,ಮಾ.29: 2014ರ ನವೆಂಬರ್ 29ರಂದು ನನ್ನನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐ‌ಎ ನಾನು ಭಾರತಕ್ಕೆ ವಾಪಸಾಗಿ ಇಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದೆ ಎಂದು ಆರೋಪಿಸಿದೆ. ಆದರೆ ವಾಸ್ತವದಲ್ಲಿ ನಾನು ಭಾರತಕ್ಕೆ ವಾಪಸ್ ಬರಲು ತುರ್ತು ಪ್ರಮಾಣ ಪತ್ರ ಮತ್ತು ಇಸ್ತಾನ್‌ಬುಲ್-ಮುಂಬೈ ಏಕಮುಖ ವಿಮಾನ ಟಿಕೆಟ್‌ನ ವ್ಯವಸ್ಥೆಯನ್ನು ತನಿಖಾ ಸಂಸ್ಥೆಯೇ ಮಾಡಿತ್ತು ಎಂದು 2014ರಲ್ಲಿ ಐಸಿಸ್ ಸೇರಲು ಸಿರಿಯಾಕ್ಕೆ ತೆರಳಿದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ಆರೀಬ್ ಮಜೀದ್ ಆರೋಪಿಸಿದ್ದಾರೆ. ಮಜೀದ್ ಹೇಳಿಕೆಯ ಹಿನ್ನೆಲೆಯಲ್ಲಿ, ವಿಶೇಷ ನ್ಯಾಯಾಲಯದ ಹಿಂದಿನ ಆದೇಶವನ್ನು ರದ್ದು ಮಾಡಿರುವ ಬಾಂಬೆ ಉಚ್ಚ ನ್ಯಾಯಾಲಯ, ಎನ್ಐ‌ಎ ಅಧಿಕಾರಿಗಳು ಮತ್ತು ಮಜೀದ್ ತಂದೆ ಮಧ್ಯೆ ನಡೆದಿರುವ ಮೊಬೈಲ್ ಫೋನ್ ಸಂಭಾಷಣೆಯ ದಾಖಲೆಗಳನ್ನು ಹಾಜರುಪಡಿಸುವಂತೆ ಐದು ದೂರವಾಣಿ ಕಂಪೆನಿಗಳ ನೋಡಲ್ ಅಧಿಕಾರಿಗಳಿಗೆ ಬುಧವಾರ ಸಮನ್ಸ್ ಜಾರಿ ಮಾಡಿದೆ.

ಪ್ರಕರಣದ ತನಿಖೆ ನಡೆಸಲು ತನ್ನ ತಂದೆ ಇಜಾಝ್ ಮತ್ತು ಮೂವರು ಎನ್ಐ‌ಎ ಅಧಿಕಾರಿಗಳ ಮಧ್ಯೆ ನಡೆದಿರುವ ಫೋನ್ ಸಂಭಾಷಣೆಯ ದಾಖಲೆಗಳನ್ನು ಪಡೆಯಬೇಕೆಂದು ಮಜೀದ್ ಸಲ್ಲಿಸಿದ್ದ ಮನವಿಯನ್ನು ವಿಶೇಷ ನ್ಯಾಯಾಲಯ ಜನವರಿಯಲ್ಲಿ ತಳ್ಳಿ ಹಾಕಿತ್ತು. ತಾನು ಭಾರತಕ್ಕೆ ವಾಪಸಾಗುವ ಸಂಪೂರ್ಣ ವ್ಯವಸ್ಥೆಯನ್ನು ಎನ್‌ಐಎ ಮಾಡಿತ್ತು ಮತ್ತು ನಂತರವಷ್ಟೇ ತನ್ನನ್ನು ಬಂಧಿಸಲಾಗಿತ್ತು ಎಂಬುದನ್ನು ಸಾಬೀತುಪಡಿಸಲು ಮೊಬೈಲ್ ಫೋನ್ ಸಂಭಾಷಣೆಯ ದಾಖಲೆಗಳನ್ನು ಕೇಳುತ್ತಿರುವುದಾಗಿ ಮಜೀದ್ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರಾದ ಇಂದ್ರಜೀತ್ ಮಹಂತಿ ಮತ್ತು ಎ.ಎಂ ಬದರ್ ಅವರ ಪೀಠ, ತನ್ನ ತಂದೆಯ ಜೊತೆ ಸಮಾಲೋಚನೆ ನಡೆಸಿದ ನಂತರ ಎನ್‌ಐಎ ಅಧಿಕಾರಿಗಳು ಎಲ್ಲ ಅಗತ್ಯ ನೆರವು ನೀಡಿ ತನ್ನನ್ನು ಭಾರತಕ್ಕೆ ವಾಪಸ್ ಕರೆಸಿದ್ದಾರೆ ಮತ್ತು ಈ ಅಧಿಕಾರಿಗಳು ಈ ಸಮಯವಿಡೀ ತನ್ನ ತಂದೆಯ ಜೊತೆ ಸಂಪರ್ಕದಲ್ಲಿದ್ದರು ಮತ್ತು ತಾನು ಭಾರತಕ್ಕೆ ವಾಪಸದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲೂ ಹಾಜರಿದ್ದರು ಎಂದು ಆರೋಪಿ ಹೇಳುತ್ತಿರುವಾಗ ಪ್ರಕರಣದ ನ್ಯಾಯಸಮ್ಮತ ತನಿಖೆ ನಡೆಯಲು ಎನ್‌ಐಎ ಅಧಿಕಾರಿಗಳ ಮತ್ತು ಆರೋಪಿಯ ತಂದೆಯ ಮೊಬೈಲ್ ಸಂಭಾಷಣೆಗಳ ದಾಖಲೆಯನ್ನು ಪಡೆಯುವುದು ಅಗತ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಆರೋಪಿಯ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಎನ್‌ಐಎ, ಪ್ರಕರಣದ ವಿಚಾರಣೆ ವಿಳಂಬವಾಗಲು ಈ ರೀತಿ ಮಾಡಲಾಗುತ್ತಿದೆ ಮತ್ತು ಈ ಹಂತದಲ್ಲಿ ಮಜೀದ್ ಫೋನ್ ಸಂಭಾಷಣೆ ದಾಖಲೆ ಪಡೆಯಲು ಅರ್ಹನಾಗುವುದಿಲ್ಲ ಎಂದು ತಿಳಿಸಿದೆ. ಎನ್‌ಐಎ ಅಧಿಕಾರಿಗಳು ಸರಕಾರಿ ಸಾಕ್ಷಿಗಳಾಗಿದ್ದರೆ ಮಾತ್ರ ಆರೋಪಿಗೆ ಫೋನ್ ಸಂಭಾಷಣೆ ದಾಖಲೆಗಳನ್ನು ಒದಗಿಸಬೇಕು ಎಂದು ಉಚ್ಚ ನ್ಯಾಯಾಲಯ ಆದೇಶಿಸಿದೆ. ಎನ್‌ಐಎ ಪ್ರಕಾರ, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಮಜೀದ್ ತನ್ನ ಮೂವರು ಗೆಳೆಯರಾದ ಅಮನ್ ತಂಡೆಲ್, ಫಹದ್ ಶೇಕ್ ಮತ್ತು ಫಹೀಮ್ ಟಂಕಿ ಜೊತೆ 2014ರ ಮೇಯಲ್ಲಿ ಧಾರ್ಮಿಕ ಯಾತ್ರೆಗೆಂದು ಇತಿಹಾದ್ ವಿಮಾನದಲ್ಲಿ ಅಬುದಾಬಿ ತೆರಳಿ ಅಲ್ಲಿಂದ ಬಗ್ದಾದ್‌ಗೆ ತೆರಳಿದ್ದರು. ನಂತರ ಅಲ್ಲಿ ಪ್ರವಾಸ ತಂಡದಿಂದ ಪ್ರತ್ಯೇಕಗೊಂಡು ಐಎಸ್ ಸೇರಲು ಸಿರಿಯಾದತ್ತ ಪ್ರಯಾಣ ಬೆಳೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News