×
Ad

ನಮ್ಮತ್ತ ಬೆಟ್ಟು ಮಾಡುವ ಬೆರಳನ್ನು ಕತ್ತರಿಸುತ್ತೇವೆ: ಉ.ಪ್ರ ಬಿಜೆಪಿ ಅಭ್ಯರ್ಥಿಯಿಂದ ಬೆದರಿಕೆ

Update: 2019-03-29 21:29 IST

ಇಟಾವ, ಮಾ.29: ನಮ್ಮ ಪಕ್ಷದತ್ತ ಬೆಟ್ಟು ಮಾಡುವ ಬೆರಳುಗಳನ್ನು ಕತ್ತರಿಸಲಾಗುವುದು ಎಂದು ಉತ್ತರ ಪ್ರದೇಶದ ಇಟವಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಶಂಕರ್ ಕಟೇರಿಯ ವಿಪಕ್ಷಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

 ನಾವು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದೇವೆ. ನಮ್ಮತ್ತ ಬೆಟ್ಟು ಮಾಡುವ ಬೆರಳುಗಳನ್ನು ಕತ್ತರಿಸಿ ಹಾಕುತ್ತೇವೆ ಎಂದು ಕಟೇರಿಯ ತನ್ನ ಸ್ವಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಎಚ್ಚರಿಸಿದ್ದಾರೆ ಎಂದು ವರದಿ ತಿಳಿಸಿದೆ.

ರಾಜ್ಯದಲ್ಲಿ ಮಾಯಾವತಿ ಸರಕಾರ ಇದ್ದ ಸಮಯದಲ್ಲಿ ತನ್ನ ಹಾಗೂ ಇತರ ಬಿಜೆಪಿ ನಾಯಕರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಗಳನ್ನು ಉಲ್ಲೇಖಿಸಿ ಕಟೇರಿಯ ಈ ಹೇಳಿಕೆ ನೀಡಿದ್ದಾರೆ. ನನ್ನನ್ನು ಜೈಲಿಗೆ ಹಾಕಲು ಮಾಯಾವತಿ ಬಹಳಷ್ಟು ಬಾರಿ ಪ್ರಯತ್ನಿಸಿದ್ದಾರೆ. ನನ್ನ ವಿರುದ್ಧ ಆಕೆ 29 ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ ನಾನು ಭಯಗೊಂಡಿಲ್ಲ ಮತ್ತು ಸಂಪೂರ್ಣ ಆತ್ಮವಿಶ್ವಾಸ ಮತ್ತು ಸ್ಪೂರ್ತಿಯಿಂದ ಇದರ ವಿರುದ್ಧ ಹೋರಾಡಿದ್ದೇನೆ ಎಂದು ಕಟೇರಿಯ ತಿಳಿಸಿದ್ದಾರೆ.

ನಮ್ಮ ವಿರುದ್ಧ ಯಾರಾದರೂ ಹುಬ್ಬು ಮೇಲೇರಿಸಿದರೆ ನಾವು ಕೂಡಾ ಅದೇ ರೀತಿ ಪ್ರತಿಕ್ರಿಯಿಸಲಿದ್ದೇವೆ. ಯಾವ ಪರಿಸ್ಥಿತಿಯಲ್ಲೂ ನಾನು ನಿಮ್ಮ ಜೊತೆಗಿರುತ್ತೇನೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ ಎಂದು ಕಟೇರಿಯ ಜನರನ್ನುದ್ದೇಶಿಸಿ ಆಶ್ವಾಸನೆ ನೀಡಿದ್ದಾರೆ. ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷದ ನಡುವಿನ ಮೈತ್ರಿಯನ್ನು ಕಟೇರಿಯ, ಸ್ವಾರ್ಥದ ಬಂಧನ ಎಂದು ವ್ಯಾಖ್ಯಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News