×
Ad

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎದುರಾಳಿಗಳಿಂದ ಸ್ಪರ್ಧೆಯೇ ಇಲ್ಲ: ನರೇಂದ್ರ ಮೋದಿ

Update: 2019-03-29 21:37 IST

ಹೊಸದಿಲ್ಲಿ, ಮಾ.29: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯೇ ಇಲ್ಲ. ಜನರು ಈಗಾಗಲೇ ನಿರ್ಧಾರ ತೆಗೆದುಕೊಂಡಾಗಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 2014ರ ಲೋಕಸಭಾ ಚುನಾವಣೆಯಲ್ಲಿ ಪಡೆದ ಸ್ಥಾನಗಳಿಗಿಂತಲೂ ಅಧಿಕ ಸ್ಥಾನಗಳನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಿಪಬ್ಲಿಕ್ ಟಿವಿಗೆ ಗುರುವಾರ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಸಂದರ್ಶನ ರಿಪಬ್ಲಿಕ್ ಟಿವಿಯಲ್ಲಿ ಶುಕ್ರವಾರ ಪ್ರಸಾರವಾಗಿತ್ತು.

ದೇಶದ ಜನರು ಮನಸ್ಸು ಮಾಡಿಯಾಗಿದೆ. ಅವರು ಸಂಪೂರ್ಣ ಬಹುಮತವಿರುವ ಸರಕಾರವನ್ನು ಬಯಸುತ್ತಾರೆ. ಜನರು 30 ವರ್ಷಗಳ ಕಾಲ ಅಸ್ಥಿರತೆಯನ್ನು ಕಂಡಿದ್ದಾರೆ ಇನ್ನು ಅವರು ಸ್ಥಿರತೆ ಬಯಸುತ್ತಾರೆ. 2014ಕ್ಕೆ ಹೋಲಿಸಿದರೆ ಮಹಾಮೈತ್ರಿ ಈಗ ಮತ್ತಷ್ಟು ಚದುರಿಕೊಂಡಿದೆ ಎಂದು ಹೇಳಿರುವ ಮೋದಿ, ವಂಶಗಳು ಪ್ರಜಾಪ್ರಭುತ್ವಕ್ಕೆ ಹಾನಿಕರ ಎಂದು ಎಚ್ಚರಿಸಿದ್ದಾರೆ. ಚುನಾವಣೆಗೆ ಕೆಲವು ದಿನಗಳಷ್ಟೇ ಇರುವಾಗ ಮಿಶನ್ ಶಕ್ತಿ ಬಗ್ಗೆ ಘೋಷಣೆ ಮಾಡಿದ ಔಚಿತ್ಯವಾದರೂ ಏನು? ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲವೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಎಸ್ಯಾಟ್‌ನಂಥ ಪರೀಕ್ಷೆಗಳನ್ನು ನಡೆಸುವುದಕ್ಕೂ ಮೊದಲು ಸಾಕಷ್ಟು ಜಾಗತಿಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಚುನಾವಣೆ ಇದೆ ಎಂಬ ಕಾರಣಕ್ಕೆ ಸರಕಾರ ತನ್ನ ಕೆಲಸವನ್ನು ನಿಲ್ಲಿಸುವಂತಿಲ್ಲ.

 ಈ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ನ ಕನಿಷ್ಟ ಆದಾಯ ಖಾತರಿ ಯೋಜನೆ ನ್ಯಾಯ್ ಬಗ್ಗೆ ಕೇಳಿದಾಗ, ಇದೇ ಕುಟುಂಬ ತಲೆಮಾರುಗಳಿಂದ ಇದನ್ನೇ ಹೇಳಿಕೊಂಡು ಬಂದಿದೆ. ಆದರೆ ಈವರೆಗೂ ಏನನ್ನೂ ಮಾಡಿಲ್ಲ. ನಾನು ಬಂಡವಾಳಶಾಹಿಗಳಿಗಾಗಿ ಕೆಲಸ ಮಾಡುತ್ತೇನೆ ಎಂದು ಆರೋಪಿಸುವವರು, ಮೋದಿ ಸರಕಾರ 2.5 ಕೋಟಿ ಕುಟುಂಬಗಳಿಗೆ ವಿದ್ಯುತ್‌ಚ್ಛಕ್ತಿ ಪೂರೈಸಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಅವರೆಲ್ಲರೂ ಕೈಗಾರಿಕೋದ್ಯಮಿಗಳೇ? ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News