ಶತ್ರುಗಳ ರಾಡಾರ್ ಪತ್ತೆಹಚ್ಚುವ ಉಪಗ್ರಹ ಉಡಾವಣೆಗೆ ಭಾರತದ ಸಿದ್ಧತೆ

Update: 2019-03-30 15:09 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ.30: ಉಪಗ್ರಹ ಹೊಡೆದುರುಳಿಸುವ ಕ್ಷಿಪಣಿ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿರುವ ಭಾರತ, ಇದೀಗ ಶತ್ರುಗಳ ರಾಡಾರನ್ನು ಪತ್ತೆಹಚ್ಚುವ ಉಪಗ್ರಹವನ್ನು ಎಪ್ರಿಲ್ 1ರಂದು ಉಡ್ಡಯನ ನಡೆಸಲು ಸಿದ್ಧತೆ ನಡೆಸಿದೆ. ಜೊತೆಗೆ, ಇದೇ ಪ್ರಪ್ರಥಮ ಬಾರಿಗೆ ಉಪಗ್ರಹ ಉಡಾವಣೆಯನ್ನು ಸಾಮಾನ್ಯ ಜನತೆಗೆ ವೀಕ್ಷಿಸಲು ‘ಇಸ್ರೋ’ ಅವಕಾಶ ನೀಡಿದೆ.

ಇದಕ್ಕಾಗಿ ಆಂಧ್ರದ ಶ್ರೀಹರಿಕೋಟಾದ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ಸಣ್ಣ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಎಪ್ರಿಲ್ 1ರಂದು ನಡೆಸಲಾಗುವ ಉಡಾವಣೆಯಲ್ಲಿ 29 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲಾಗುತ್ತದೆ. ಇದು ಇಸ್ರೋದ ಸಿ45 ಪಿಎಸ್‌ಎಲ್‌ವಿಯ 47ನೇ ಕಾರ್ಯನಿಯೋಜನೆಯಾಗಿದ್ದು, ಕಕ್ಷೆಯಲ್ಲಿ ನಿಖರವಾಗಿ ಉಪಗ್ರಹಗಳನ್ನು ನೆಲೆಗೊಳಿಸುವ ಇಸ್ರೋದ ಸಾಮರ್ಥ್ಯದ ಪ್ರಾತ್ಯಕ್ಷಿಕೆಯಾಗಿದೆ. ಉಡಾವಣೆಯ ವೆಚ್ಚ ಕಡಿಮೆಗೊಳಿಸುವ ಉದ್ದೇಶದಿಂದ ಇದೇ ಪ್ರಥಮ ಬಾರಿಗೆ ಒಂದೇ ಉಡಾವಣೆಯಲ್ಲಿ ಮೂರು ವಿಭಾಗದ ಉಪಗ್ರಹಗಳನ್ನು ವಿಭಿನ್ನ ಎತ್ತರದಲ್ಲಿ ಕಕ್ಷೆಯಲ್ಲಿ ನೆಲೆಗೊಳಿಸುವ ಉದ್ದೇಶವಿದೆ.

ಮೊದಲ ಉಪಗ್ರಹವನ್ನು 749 ಕಿ.ಮೀ ಎತ್ತರದಲ್ಲಿ ಕಕ್ಷೆಯಲ್ಲಿ ನೆಲೆಗೊಳಿಸಲಾಗುತ್ತದೆ. ಎರಡು ಮತ್ತು ಮೂರನೇ ಹಂತದಲ್ಲಿ 504 ಕಿ.ಮೀ ಕಕ್ಷೆಯಲ್ಲಿ ಗ್ರಾಹಕರ ಉಪಗ್ರಹಗಳನ್ನು ನೆಲೆಗೊಳಿಸಲಾಗುತ್ತದೆ. ನಾಲ್ಕನೇ ಹಂತದಲ್ಲಿ 485 ಕಿ.ಮೀ ಕಕ್ಷೆಯಲ್ಲಿ ಮೂರು ಪ್ರಾಯೋಗಿಕ ಉಪಗ್ರಹಗಳನ್ನು ನೆಲೆಗೊಳಿಸಲಾಗುತ್ತದೆ ಎಂದು ಇಸ್ರೋದ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ಈ ಬಾರಿ ಕಕ್ಷೆಯ ವೇದಿಕೆ ಸೋಲಾರ್ ಬ್ಯಾಟರಿಗಳಿಂದ ಇಂಧನ ಪಡೆಯುತ್ತದೆ. ಎಪ್ರಿಲ್ 1ರಂದು ನಡೆಸಲಾಗುವ ಉಡಾವಣೆಯಲ್ಲಿ ಎಮಿಸ್ಯಾಟ್ ಉಪಗ್ರಹ ಅತ್ಯಂತ ಮಹತ್ವದ್ದಾಗಿದೆ. ಇಸ್ರೋ ಮತ್ತು ಡಿಆರ್‌ಡಿಒ ಜಂಟಿಯಾಗಿ ಅಭಿವೃದ್ಧಿಗೊಳಿಸಿರುವ 436 ಕಿ.ಗ್ರಾಂ. ತೂಕದ ಎಲೆಕ್ಟ್ರಾನಿಕ್ಸ್ ಇಂಟೆಲಿಜೆನ್ಸ್ ಸ್ಯಾಟಿಲೈಟ್ (ಎಮಿಸ್ಯಾಟ್) ಉಪಗ್ರಹವನ್ನು ವಿದ್ಯುತ್‌ಕಾಂತೀಯ ತರಂಗಗಳ ಮಾಪನಕ್ಕೆ ಬಳಸಲಾಗುತ್ತದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News