ಮೂರ್ಖ ಸರಕಾರ ಮಾತ್ರ ರಕ್ಷಣಾ ರಹಸ್ಯವನ್ನು ಬಹಿರಂಗಗೊಳಿಸುತ್ತದೆ: ಚಿದಂಬರಂ

Update: 2019-03-30 15:16 GMT

ಹೊಸದಿಲ್ಲಿ, ಮಾ. 30: ಭಾರತ ಉಪಗ್ರಹ ನಿಗ್ರಹ ಕ್ಷಿಪಣಿ ಸಾಮರ್ಥ್ಯ ಪ್ರದರ್ಶಿಸಿದೆ ಎಂದು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ, ‘ಮೂರ್ಖ ಸರಕಾರ’ ಮಾತ್ರ ರಕ್ಷಣಾ ರಹಸ್ಯವನ್ನು ಬಹಿರಂಗೊಳಿಸುತ್ತದೆ ಎಂದಿದ್ದಾರೆ.

 ಮಿಷನ್ ಶಕ್ತಿ ಅಡಿಯಲ್ಲಿ ಸಜೀವ ಉಪಗ್ರಹ ಹೊಡೆದುರುಳಿಸುವ ಸಾಮರ್ಥ್ಯದ ಉಪಗ್ರಹ ನಿಗ್ರಹ ಕ್ಷಿಪಣಿಯನ್ನು ಭಾರತ ಯಶಸ್ವಿ ಪ್ರಯೋಗ ನಡೆಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ದೇಶವನ್ನು ಉದ್ದೇಶಿ ಹೇಳಿದ್ದರು. ಈ ಅಪರೂಪದ ಸಾಧನೆಯಿಂದ ಭಾರತ ಬಾಹ್ಯಾಕಾಶ ಸೂಪರ್ ಪವರ್‌ನ ವಿಶೇಷ ಗುಂಪಿಗೆ ಸೇರಿದೆ ಎಂದು ಅವರು ಹೇಳಿದ್ದರು.

ಘೋಷಣೆ ಮಾಡಿರುವುದಕ್ಕೆ ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡು ಟ್ವೀಟ್ ಮಾಡಿರುವ ಚಿದಂಬರಂ, ‘‘ಉಪಗ್ರಹ ಹೊಡೆದುರುಳಿಸುವ ಸಾಮರ್ಥ್ಯ ಹಲವು ವರ್ಷಗಳ ಹಿಂದೆಯೂ ಇತ್ತು. ಸರಕಾರ ಅದನ್ನು ರಹಸ್ಯವಾಗಿ ಇರಿಸಿತ್ತು. ಕೇವಲ ಮೂರ್ಖ ಸರಕಾರ ಮಾತ್ರ ಅದನ್ನು ಬಹಿರಂಗಗೊಳಿಸಬಹುದು ಹಾಗೂ ರಕ್ಷಣಾ ರಹಸ್ಯಕ್ಕೆ ದ್ರೋಹ ಎಸಗಬಹುದು’’ ಎಂದು ಹೇಳಿದರು. ಈ ಘೋಷಣೆ ಮಾಡಿರುವ ಉದ್ದೇಶ ಏನು ಎಂದು ಮಾಜಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಪ್ರಶ್ನಿಸಿದರು. ‘‘ಇದಲ್ಲದೆ, ಚುನಾವಣಾ ಪ್ರಚಾರದ ನಡುವೆ ಇದನ್ನು ಈಗ ಮಾಡಿರುವುದು ಯಾಕೆ?, ಕೇವಲ ಬಿಜೆಪಿಯ ಕ್ಷೀಣಿಸುತ್ತಿರುವ ವರ್ಚಸ್ಸನ್ನು ಹೆಚ್ಚಿಸಲು’’ ಎಂದು ಚಿದಂಬರಂ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News