ವಿವಿಐಪಿ ಕಾಪ್ಟರ್ ಪ್ರಕರಣ: ಸುಷೇನ್ ಗುಪ್ತಾ ಕಸ್ಟಡಿ ಅವಧಿ ವಿಸ್ತರಣೆ

Update: 2019-03-30 16:16 GMT

ಹೊಸದಿಲ್ಲಿ,ಮಾ.30: ದಿಲ್ಲಿಯ ವಿಶೇಷ ನ್ಯಾಯಾಲಯವು 3,600 ಕೋ.ರೂ.ಗಳ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈ.ಡಿ)ದಿಂದ ಬಂಧಿಸಲ್ಪಟ್ಟಿರುವ ರಕ್ಷಣಾ ಉಪಕರಣಗಳ ಏಜೆಂಟ್ ಸುಷೇನ್ ಮೋಹನ ಗುಪ್ತಾನ ಕಸ್ಟಡಿ ವಿಚಾರಣೆ ಅವಧಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಿ ಶನಿವಾರ ಆದೇಶಿಸಿದೆ.

ಗುಪ್ತಾನನ್ನು ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಬಂಧಿಸಿಲಾಗಿದ್ದು,ಕಸ್ಟಡಿ ಅವಧಿಯನ್ನು ಇನ್ನೂ 10 ದಿನ ವಿಸ್ತರಿಸುವಂತೆ ಈ.ಡಿ. ನ್ಯಾಯಾಲಯವನ್ನು ಕೋರಿತ್ತು.

ಈ.ಡಿ. ವಿಶೇಷ ಸಾರ್ವಜನಿಕ ಅಭಿಯೋಜಕರಾದ ಡಿ.ಪಿ.ಸಿಂಗ್ ಮತ್ತು ಎನ್.ಕೆ.ಮಟ್ಟಾ ಅವರು,ಗುಪ್ತಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾನೆ ಮತ್ತು ಪ್ರಕರಣದಲ್ಲಿ ಸಂಭಾವ್ಯ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣದಲ್ಲಿ ದಾಖಲೆಗಳು ಭಾರೀ ಪ್ರಮಾಣದಲ್ಲಿವೆ ಮತ್ತು ಈ ದಾಖಲೆಗಳ ಪರಿಶೀಲನೆಗೆ ಹಾಗೂ ಇತ್ತೀಚಿಗೆ ಮಾಫಿ ಸಾಕ್ಷಿದಾರನಾಗಿ ಬದಲಾಗಿರುವ ರಾಜೀವ ಸಕ್ಸೇನಾ ಸೇರಿದಂತೆ ಕೆಲವು ಸಾಕ್ಷಿಗಳನ್ನು ಗುಪ್ತಾ ಜೊತೆ ಮುಖಾಮುಖಿಯಾಗಿಸಬೇಕಿದೆ, ಹೀಗಾಗಿ ಕಸ್ಟಡಿ ಅವಧಿಯನ್ನು ಹತ್ತು ದಿನಗಳ ಕಾಲ ವಿಸ್ತರಿಸುವಂತೆ ಈ.ಡಿ.ಪರ ವಕೀಲ ಸಂವೇದ ವರ್ಮಾ ಕೋರಿದರು.

ಇದನ್ನು ವಿರೋಧಿಸಿದ ಪ್ರತಿವಾದಿ ಪರ ವಕೀಲರು,ಗುಪ್ತಾನನ್ನು ಈಗಾಗಲೇ ಪ್ರಶ್ನಿಸಲಾಗಿದೆ ಮತ್ತು ಆತನ ಕಸ್ಟಡಿ ವಿಸ್ತರಣೆಯನ್ನು ಕೋರಲು ಯಾವುದೇ ತಾಜಾ ಕಾರಣಗಳಿಲ್ಲ ಎಂದು ವಾದಿಸಿದರು.

ಸಕ್ಸೇನಾನನ್ನು ಯುಎಇಯಿಂದ ಗಡಿಪಾರು ಮಾಡಲಾಗಿತ್ತು. ಆತ ಬಹಿರಂಗಗೊಳಿಸಿದ ಮಾಹಿತಿಗಳಿಂದಾಗಿ ಪ್ರಕರಣದಲ್ಲಿ ಗುಪ್ತಾನ ಪಾತ್ರ ಬೆಳಕಿಗೆ ಬಂದಿತ್ತು.

ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳ ಖರೀದಿಯಲ್ಲಿ ಕೆಲವು ಹಣಪಾವತಿ ವಿವರಗಳನ್ನು ಗುಪ್ತಾ ಹೊಂದಿದ್ದಾನೆಂಬ ಶಂಕೆಯಿದ್ದು,ಅವುಗಳನ್ನು ಬಯಲಿಗೆಳೆಯಬೇಕಿದೆ ಎಂದು ಶರ್ಮಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News