ಬಾಲಕೋಟ್ ವಾಯುದಾಳಿಯ ಶ್ರೇಯಸ್ಸು ಮೋದಿಗೆ ಯಾಕೆ ಸಲ್ಲಬಾರದು: ರಾಜನಾಥ್ ಸಿಂಗ್ ಪ್ರಶ್ನೆ

Update: 2019-03-30 16:35 GMT

ಅಹ್ಮದಾಬಾದ್, ಮಾ. 30: ಪಾಕಿಸ್ತಾನ ವಿಭಜಿಸಿದ ಶ್ರೇಯಸ್ಸು ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಸಲ್ಲುವುದಾದರೆ, ಬಾಲಕೋಟ್ ವಾಯುದಾಳಿಯ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾಕೆ ಸಲ್ಲಬಾರದು ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಶನಿವಾರ ಪ್ರಶ್ನಿಸಿದ್ದಾರೆ.

 ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಬೆಂಬಲಿಸಿ ಇಲ್ಲಿ ನಡೆಸಲಾದ ರ್ಯಾಲಿಯಲ್ಲಿ ಸಿಂಗ್ ಮಾತನಾಡಿದರು. “ಪಾಕಿಸ್ತಾನವನ್ನು ವಿಭಜಿಸಿದ ಶ್ರೇಯಸ್ಸು ನಮ್ಮ ಸೇನಾ ಪಡೆಗೆ ಸಲ್ಲಬೇಕು. ಪಾಕಿಸ್ತಾನ ವಿಭಜನೆಯಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ರೂಪುಗೊಂಡಿತು. ಆದರೆ, ಯುದ್ಧದ ನಂತರ ಸಂಸತ್ತಿನಲ್ಲಿ ನಮ್ಮ ನಾಯಕರಾದ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ಶ್ಲಾಘಿಸಿದ್ದರು. ಇಂದಿರಾ ಗಾಂಧಿ ಅವರನ್ನು ಇಡೀ ರಾಷ್ಟ್ರವೇ ಶ್ಲಾಘಿಸಿತ್ತು” ಎಂದು ಸಿಂಗ್ ಹೇಳಿದರು. ಪುಲ್ವಾಮ ದಾಳಿ ಉಲ್ಲೇಖಿಸಿದ ಸಿಂಗ್, “ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾದ ಬಳಿಕ ಮೋದಿ ಅವರು ನಮ್ಮ ಸೇನಾ ಪಡೆಗೆ ಸ್ವಾತಂತ್ರ್ಯ ನೀಡಿದರು. 1971ರಲ್ಲಿ ಪಾಕಿಸ್ತಾನವನ್ನು ವಿಭಜಿಸಿದ ಶ್ರೇಯಸ್ಸು ಇಂದಿರಾ ಗಾಂಧಿ ಅವರಿಗೆ ಸಲ್ಲುವುದಾದರೆ, ಬಾಲಕೋಟ್‌ನಲ್ಲಿ ವಾಯು ಪಡೆ ನಡೆಸಿದ ದಾಳಿಯ ಶ್ರೇಯಸ್ಸು ಮೋದಿಜಿ ಅವರಿಗೆ ಯಾಕೆ ಸಲ್ಲಬಾರದು” ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News