‘ಮೋದಿಯ 100 ತಪ್ಪುಗಳು’: ಪುಸ್ತಕ ಬಿಡುಗಡೆಗೊಳಿಸಿದ ಕಾಂಗ್ರೆಸ್
ಮುಂಬೈ, ಮಾ.30: ಪ್ರಧಾನಿ ನರೇಂದ್ರ ಮೋದಿಯ ಕುರಿತು ಕಾಂಗ್ರೆಸ್ ಪಕ್ಷ ಪುಸ್ತಕವೊಂದನ್ನು ಶನಿವಾರ ಬಿಡುಗಡೆಗೊಳಿಸಿದ್ದು ಇದಕ್ಕೆ ‘ಮೋದಿಯ 100 ತಪ್ಪುಗಳು’ ಎಂಬ ಶೀರ್ಷಿಕೆಯಿದ್ದು, ‘ಬಿಜೆಪಿಯ ಶಿಶುಪಾಲ’ ಎಂಬ ಟ್ಯಾಗ್‌ಲೈನ್ ನೀಡಲಾಗಿದೆ.
ದಾದರ್‌ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪ್ರಮುಖರಾದ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಅಶೋಕ್ ಚವಾಣ್ ಉಪಸ್ಥಿತಿಯಲ್ಲಿ ನಡೆದ ಸಭೆಯ ಬಳಿಕ ‘ಪ್ರಧಾನಿಯ 100 ತಪ್ಪುಗಳು’ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ರಫೇಲ್ ಒಪ್ಪಂದ ಮೋದಿಯ ಮೊದಲ ತಪ್ಪು ಎಂದು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.
‘ರಫೇಲ್ ಒಪ್ಪಂದ- ಅಂಬಾನಿಯ ಗೆಲುವು’ ಎಂಬ ಲೇಖನದಲ್ಲಿ , ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ರಫೇಲ್ ವಿಮಾನ ಖರೀದಿಗೆ ಉಲ್ಲೇಖಿಸಿದ್ದ ಮೊತ್ತದ ಮೂರು ಪಟ್ಟು ಹೆಚ್ಚಿನ ಮೊತ್ತವನ್ನು ಮೋದಿ ಸರಕಾರ ಪಾವತಿಸಿದೆ. 36 ವಿಮಾನಗಳಿಗೆ 58 ಕೋಟಿ ರೂ. ಪಾವತಿಸಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ ಅನಿಲ್ ಅಂಬಾನಿಯನ್ನು ಭಾರತೀಯ ಪಾಲುದಾರ ಸಂಸ್ಥೆಯನ್ನಾಗಿ ಆಯ್ಕೆ ಮಾಡುವಂತೆ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆಗೆ ಮೋದಿ ಸರಕಾರ ಯಾಕೆ ಒತ್ತಡ ತಂದಿದೆ ಎಂದೂ ಪ್ರಶ್ನಿಸಲಾಗಿದೆ. ತನ್ನ ಮಿಲಿಯಾಧೀಶ ಸ್ನೇಹಿತನಿಗಾಗಿ ಪ್ರಧಾನಿ ದೇಶದ ಸಾವಿರಾರು ಕೋಟಿ ರೂ.ಗಳನ್ನು ಕೊಡುಗೆ ನೀಡಿದ್ದಾರೆ ಎಂದು ತಿಳಿಸಲಾಗಿದೆ. ಪೊಳ್ಳು ಭರವಸೆ; ಕಡಿಮೆ ಕೆಲಸ ಎಂಬ ಮತ್ತೊಂದು ಲೇಖನದಲ್ಲಿ ಪ್ರಧಾನಿ ಮೋದಿ ಸರಕಾರ ಕೆಲಸ ಮಾಡುವುದಕ್ಕಿಂತ, ಸರಕಾರಿ ಹಣದಲ್ಲಿ ಜಾಹೀರಾತು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲೇ ಮಗ್ನವಾಗಿದೆ ಎಂದು ಹೇಳಲಾಗಿದೆ.
‘ನೋಟು ರದ್ದತಿ ಎಂಬ ಭೂತ, ಅರ್ಥವ್ಯವಸ್ಥೆ ಪಾತಾಳಕ್ಕೆ’ ಎಂಬ ಲೇಖನದಲ್ಲಿ ನೋಟು ರದ್ದತಿಯ ನಿರ್ಧಾರದಿಂದ ಜನಸಾಮಾನ್ಯರು ಪಟ್ಟಿರುವ ಬವಣೆಯನ್ನು ವಿವರಿಸಲಾಗಿದೆ. ಮೋದಿಯ ನಿರ್ಧಾರದಿಂದ ಕಪ್ಪುಹಣದ ನಿಯಂತ್ರಣವಾಗಲಿಲ್ಲ, ಆದರೆ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡರು. ಇ-ಕಾಮರ್ಸ್ ವ್ಯವಹಾರದ ಸಂಸ್ಥೆಗಳ ವ್ಯಾಪಾರ ವೃದ್ಧಿಸಿತು ಅಷ್ಟೇ ಎಂದು ಹೇಳಲಾಗಿದೆ.
ಈ ಕೃತಿಯಲ್ಲಿ ಮೋದಿಯನ್ನು ‘ಆಧುನಿಕ ಶಿಶುಪಾಲ’ ಎಂದು ಬಣ್ಣಿಸಲಾಗಿದೆ. ಮಹಾಭಾರತ ಪುರಾಣಕೃತಿಯಲ್ಲಿ ಶಿಶುಪಾಲ ಎಂಬ ರಾಜನ ತಾಯಿ ತನ್ನ ಮಗ 100 ತಪ್ಪು ಮಾಡುವವರೆಗೆ ಆತನನ್ನು ಕ್ಷಮಿಸಬೇಕೆಂದು ಸೋದರಳಿಯ ಕೃಷ್ಣನಿಂದ ವರ ಬೇಡುತ್ತಾಳೆ. ಅದಕ್ಕೆ ಸಮ್ಮತಿಸಿದ ಕೃಷ್ಣ ಶಿಶುಪಾಲನ 101ನೇ ತಪ್ಪಿಗಾಗಿ ಆತನನ್ನು ವಧಿಸುತ್ತಾನೆ. ಸದಾಕಾಲ ಪುರಾಣದ ವಾಕ್ಯಗಳನ್ನು ಉಲ್ಲೇಖಿಸುವ ಮೋದಿಗೆ ಈಗ ಶಿಶುಪಾಲನ ಕತೆಯನ್ನು ನೆನಪಿಸಬೇಕಿದೆ. ದೇಶದ ಜನರು ಈ ಶಿಶುಪಾಲ(ಮೋದಿ)ನ 100 ತಪ್ಪುಗಳನ್ನು ಕ್ಷಮಿಸಿದ್ದಾರೆ. ಈಗ 101ನೇ ತಪ್ಪು ಮಾಡಿರುವ ಮೋದಿಗೆ ಖಂಡಿತಾ ಶಿಕ್ಷೆ ಕಾದಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.