ಪುಲ್ವಾಮ ಹುತಾತ್ಮರ ಕುಟುಂಬಸ್ಥರನ್ನು ಮೋದಿ ಭೇಟಿ ಮಾಡಿದ್ದಾರೆಯೇ?

Update: 2019-03-30 17:50 GMT

ಶ್ರೀನಗರ,ಮಾ.30: ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್‌ನ 40 ಯೋಧರನ್ನು ಬಲಿಪಡೆದುಕೊಂಡ ಆತ್ಮಾಹುತಿ ದಾಳಿಯ ಬಗ್ಗೆ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಸಂಶಯ ವ್ಯಕ್ತಪಡಿಸಿದ್ದಾರೆ.

ಶ್ರೀನಗರದಲ್ಲಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ, ಉಗ್ರರ ಜೊತೆ ಹೋರಾಡುತ್ತಾ ಹುತಾತ್ಮರಾದ ಅಸಂಖ್ಯಾತ ಯೋಧರಿಗೆ ಪ್ರಧಾನಿ ಮೋದಿ ಎಂದಾದರೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆಯೇ?, ಅವರು ಎಂದಾದರೂ ಹುತಾತ್ಮ ಯೋಧರ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆಯೇ? ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳನ್ನು ಅವರು ಭೇಟಿಯಾಗಿದ್ದಾರೆಯೇ? ಅಷ್ಟಕ್ಕೂ ಪುಲ್ವಾಮದಲ್ಲಿ ಮಡಿದ 40 ಸಿಆರ್‌ಪಿಎಫ್ ಯೋಧರ ಸಾವಿನ ಬಗ್ಗೆಯೂ ನನಗೆ ಸಂಶಯವಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದರು. ಜೈಶೆ ಮುಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತ್ತು. ಈ ಘಟನೆಯ ನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿತ್ತು.

ಫೆಬ್ರವರಿ 28ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ವಾಯುಪಡೆಯ ಆರು ಜವಾನರು ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದರು. ಈ ಘಟನೆಯ ಬಗ್ಗೆಯೂ ಅಬ್ದುಲ್ಲಾ ಸಂಶಯ ವ್ಯಕ್ತಪಡಿಸಿದ್ದಾರೆ.

ಮೋದಿಯನ್ನು ಗುರಿಯಾಗಿಸಿದ ಅಬ್ದುಲ್ಲಾ, ಪ್ರಧಾನಿ ಮೋದಿ ಉಡಾಯಿಸಿದ ಕ್ಷಿಪಣಿಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿರ್ಮಿಸಿದ್ದರು. ಸದ್ಯ ಇದು ಚುನಾವಣೆಯ ಸಮಯವಾಗಿರುವುದರಿಂದ ಮೋದಿಜಿ ಬಟನ್ ಒತ್ತಿದರು. ಆದರೆ ಅವರು ಒತ್ತಿದ ಬಟನ್ ತಪ್ಪಾಗಿತ್ತು ಮತ್ತು ಹೆಲಿಕಾಪ್ಟರ್ ಪತನವಾಗಿ ಆರು ಯೋಧರ ಸಾವಿಗೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News