ಪಂಚತಂತ್ರ: ಚಿಗುರು, ಬೇರು ಮತ್ತು ನೂರು ಭಾವಗಳ ರೇಸ್ ಕಾರು

Update: 2019-03-30 18:48 GMT

ಕತೆ ಇಲ್ಲದೇ ಘಟನೆ, ಹಾಡು ಮತ್ತು ಸಂಭಾಷಣೆಗಳಿಂದಲೇ ಚಿತ್ರ ಮಾಡುವ ಶೈಲಿ ಯೋಗರಾಜ್ ಭಟ್ಟರದ್ದು. ಆದರೆ ಈ ಬಾರಿ ಅದರಲ್ಲೊಂದು ಬದಲಾವಣೆ ಮಾಡಿಕೊಂಡಿದ್ದಾರೆ. ಚಿತ್ರದ ಸಬ್ಜೆಕ್ಟ್ ಆಗಿ ರೇಸನ್ನು ಆರಿಸಿದ ಕಾರಣವೋ ಗೊತ್ತಿಲ್ಲ, ಘಟನೆ ಮತ್ತು ಸಂಭಾಷಣೆಗಳು ವೇಗವಾಗಿಯೇ ಸಾಗುತ್ತವೆ. ಹಾಗಂತ ಕತೆ ಹೇಳುವ ಪ್ರಯತ್ನವೇನೂ ಅವರು ಮಾಡಿಲ್ಲ.

ಸ್ಪೀಡಾ ಮೀಟರ್‌ನಲ್ಲಿ ಬೀಳುವಂತೆ ಕಲಾವಿದರ ಹೆಸರು ಬೀಳುವುದರೊಂದಿಗೆ ಆಕರ್ಷಕ ಪಂದ್ಯದ ರೀತಿಯಲ್ಲೇ ಪಂಚತಂತ್ರ ಸಿನೆಮಾ ಶುರುವಾಗುತ್ತದೆ. ಒಂದೇ ಕಂಪೌಂಡ್ ಒಳಗಿನ ಎದುರು ಬದುರು ಮನೆಗಳಲ್ಲಿ ನಡೆಯುವ ಹಿರಿಯ ಮತ್ತು ಕಿರಿಯರ ನಡುವೆ ಇರುವ ಜನರೇಶನ್ ಗ್ಯಾಪ್ ಜಗಳದ ಬಗ್ಗೆ ತೋರಿಸಲಾಗಿದೆ. ಯುವಕರು ತಂದೆ ತಾಯಿ ಇರದ ಅನಾಥರು. ಇನ್ನೊಂದೆಡೆ ತಮ್ಮ ಮಕ್ಕಳಿಂದ ದೂರಾಗಿರುವ ವೃದ್ಧರು. ಈ ಕಾರಣದಿಂದಲೇ ಇವರ ನಡುವೆ ಭಾವಗಳೇ ಹೊಂದಿಕೆಯಾಗುವುದಿಲ್ಲ. ಆದರೂ ಯುವಕರ ಗ್ಯಾರೇಜ್‌ನಲ್ಲಿನ ಮೆಕ್ಯಾನಿಕ್ ಕಾರ್ತಿಕ್ ಮತ್ತು ವೃದ್ಧರ ಕಾಂಪ್ಲೆಕ್ಸ್ ಮಾಲಕ ರಂಗಪ್ಪನ ಮಗಳು ಸಾಹಿತ್ಯಾ ನಡುವೆ ನಡೆಯುವ ಪ್ರೇಮ ಮೊದಲಾರ್ಧದ ನೋಡಿಸುವಿಕೆಗೆ ಪೂರಕವಾಗಿರುತ್ತದೆ. ದ್ವಿತೀಯಾರ್ಧದಲ್ಲಿ ಕತೆ ರೇಸ್ ರೂಪ ಪಡೆದುಕೊಳ್ಳುತ್ತದೆ. ವಿರೋಧಿ ಬಣಗಳ ಪ್ರೇಮಕತೆ ಮುಂದೇನಾಗುತ್ತದೆ? ಎರಡು ಗುಂಪುಗಳ ರೇಸ್‌ನಲ್ಲಿ ಗೆಲ್ಲುವುದು ಯಾರು? ಸೋಲಿನಲ್ಲಿಯೂ ಗೆಲುವು ಕಾಣುವ, ಗೆದ್ದರೂ ಸೋಲುವ ಭಾವ ಯಾಕೆ? ಮೊದಲಾದ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರ ಇದೆ.

ಎರಡು ಗುಂಪುಗಳ ನಡುವಿನ ಘರ್ಷಣೆ ಮತ್ತು ವಿರೋಧಿ ಬಣದ ಹುಡುಗಿಯನ್ನು ಮತ್ತೊಂದು ಬಣದ ಹುಡುಗ ಇಷ್ಟ ಪಡುವಂಥ ಎಷ್ಟೋ ಚಿತ್ರಗಳು ಬಂದು ಹೋಗಿವೆ. ಆದರೆ ಲೊಕೇಶನ್ ವಿಚಾರಕ್ಕೆ ಬಂದರೆ 2000ದಲ್ಲಿ ತೆರೆಕಂಡ ಹಿಂದಿಯ ಜೋಶ್ ಸಿನೆಮಾ ನೆನಪಾದೀತು. ಬಹುಶಃ ಆ ಚಿತ್ರದ ನಾಯಕ ಶಾರುಖ್ ಖಾನ್‌ರ ಮ್ಯಾನರಿಸಮ್ ಅಳವಡಿಸಲು ಭಟ್ಟರು ಹೇಳಿದ್ದಾರೇನೋ ಗೊತ್ತಿಲ್ಲ. ವಿಹಾನ್ ಗೌಡ ಅಂತೂ ಪದೇ ಪದೇ ಶಾರುಖ್ ಮಿಮಿಕ್ರಿಯನ್ನೇ ಮಾಡಿ ಬಿಟ್ಟಿದ್ದಾರೆ. ಜೊತೆಗೆ ಭಟ್ಟರ ಶೈಲಿಯ ನಾಸಿಕದ ಮಾತುಗಳು ಬೇರೆ. ಇವನ್ನೆಲ್ಲ ಆತನ ಪ್ರೇಯಸಿಯ ಹೊರತು ಸಿನೆಮಾ ಪ್ರೇಕ್ಷಕರಿಗೆ ಸಹಿಸಲು ಕಷ್ಟ ಎನ್ನುವ ಹಂತದಲ್ಲಿ ಒಂದೆರಡು ಸಂಭಾಷಣೆಗಳು ನಗು ಮೂಡಿಸಿ ಸಹ್ಯವಾಗಿಸುತ್ತವೆ. ಜೊತೆಗೆ ಕಾಲು ಕೆರೆದು ಜಗಳ ಮಾಡುವ ಪ್ರೇಯಸಿಯ ಕಾಲನ್ನೇ ಕೈಗಳಿಂದ ಕೆರೆಯುತ್ತಾನೆ.

ಆ ಕೆರೆದಾಟಕ್ಕೆ ಪ್ರೇಯಸಿಯಾಗಿ ಸೊನಾಲ್ ನೀಡುವ ನಗು ಪ್ರೇಕ್ಷಕರಲ್ಲಿಯೂ ಕಚಗುಳಿ ಮೂಡಿಸುತ್ತದೆ. ಒಂದು ರೀತಿಯಲ್ಲಿ ಚಿತ್ರಕ್ಕೆ ನಾಯಕನೇ ರಂಗಾಯಣ ರಘು. ನಾಯಕಿಯ ತಂದೆ ರಂಗಪ್ಪನಾಗಿ ರಂಗಾಯಣ ರಘು ನಟನೆ ಮನಗೆಲ್ಲು ತ್ತದೆ. ಮೆಡಿಕಲ್ ಸುಬ್ಬಣ್ಣನಾಗಿ ಕರಿಸುಬ್ಬು ಕೂಡ ನೆನಪಲ್ಲಿ ಉಳಿಯು ತ್ತಾರೆ. ದೀಪಕ್ ಶೆಟ್ಟಿಯವರ ಬಾಂಡ್ ಪಾತ್ರ ಅವರೊಳಗಿನ ನೈಜ ನಟನನ್ನು ಹೊರಗೆ ತೋರಿಸಿದೆ. ರಾಜ ಬಲವಾದಿ ನಿರ್ವಹಿಸಿರುವ ವೇಣುವಿನ ಪಾತ್ರ ಕುತೂಹಲ ಮೂಡಿಸುತ್ತದೆ. ಆದರೆ ಆ ಕುತೂಹಲವನ್ನು ಬೆಳೆಸುವುದಕ್ಕೆ ಬದಲಾಗಿ ಅಳಿಸಿ ಹಾಕಿದ್ದಾರೆ ನಿರ್ದೇಶಕರು. ಮಾತ್ರವಲ್ಲ ಕ್ಲೈಮ್ಯಾಕ್ಸ್‌ನಲ್ಲಿ ಗಂಭೀರವಾಗಿ ಅಂತ್ಯಗೊಳ್ಳುವ ದೃಶ್ಯಕ್ಕೂ ದೀಪಕ್ ಶೆಟ್ಟಿಯ ತಮಾಷೆಯ ಮ್ಯಾನರಿಸಮ್ಮನ್ನು ತುರುಕಿ ಗೊಂದಲ ನೀಡುತ್ತಾರೆ. ಆದರೆ ಸುಜ್ಞಾನ್ ಅವರ ಛಾಯಾಗ್ರಹಣ, ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್.

ಕ್ರೀಡಾ ಆಧಾರಿತ ಸಿನೆಮಾಗಳಲ್ಲಿ ದ್ವಿತೀಯಾರ್ಧದ ಬಹುಭಾಗ ಆಯಾ ಕ್ರೀಡಾ ದೃಶ್ಯಗಳೇ ತುಂಬಿರುವಂತೆ ಇಲ್ಲಿಯೂ 40 ನಿಮಿಷಗಳ ಕಾರ್ ರೇಸ್ ದೃಶ್ಯಗಳಿವೆ. ನಾಯಕನ ಉಡಾಫೆ ಭಾವದೊಂದಿಗೆ ಆರಂಭಗೊಳ್ಳುವ ರೇಸ್ ಅಂತ್ಯವಾಗುವ ಹೊತ್ತಿಗೆ ನವರಸಗಳನ್ನೂ ತೋರಿಸಿರುತ್ತದೆ. ಭಟ್ಟರ ಚಿತ್ರಗಳಲ್ಲಿ ಉಡಾಫೆ ನಾಯಕ ಮತ್ತು ಜನರೇಶನ್ ಗ್ಯಾಪ್ ತೋರಿಸುವ ವೃದ್ಧ ಮತ್ತು ಮರೆಯುವ ಘಳಿಗೆಗಳು ಹಿಂದೆಯೂ ಸಾಕಷ್ಟು ಚಿತ್ರಗಳಲ್ಲಿ ಇವೆ. ಆದರೆ ಇಲ್ಲಿ ಅಂಥ ಭಾವಗಳ ಎರಡು ಗುಂಪುಗಳೇ ಕಣಕ್ಕಿಳಿದಿವೆ. ನಗುನಗಿಸುತ್ತಲೇ ಜೀವನದ ಹಲವಾರು ಮೌಲ್ಯಗಳನ್ನು ಭಟ್ಟರು ಹೇಳುತ್ತಾ ಹೋಗುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳುವವರು ಮತ್ತು ಅರ್ಥ ಮಾಡದೇ ನೋಡುವವರು ಇಬ್ಬರಿಗೂ ಮನರಂಜನೆ ಕಡಿಮೆಯಾಗದಂತೆ ಚಿತ್ರ ಮಾಡಿದ್ದಾರೆ! ಪ್ರಯಾಣದಲ್ಲಿನ, ಶಕ್ತಿಯಲ್ಲಿನ, ವೇಗದಲ್ಲಿನ ಯಶಸ್ಸಿನ ಆಚೆ ಬದುಕಿನಲ್ಲಿ ಬೇರೊಂದು ಯಶಸ್ಸು ಅಡಗಿದೆ ಎನ್ನುವುದನ್ನು ಚಿತ್ರ ಸೂಚ್ಯವಾಗಿ ಹೇಳುತ್ತದೆ. ಒಟ್ಟಿನಲ್ಲಿ ಭಟ್ಟರ ಸಿನೆಮಾಗಳ ಅಭಿಮಾನಿಗಳು ತಪ್ಪದೇ ನೋಡಬಹುದಾದ ಚಿತ್ರ ಪಂಚತಂತ್ರ.


ತಾರಾಗಣ: ವಿಹಾನ್ ಗೌಡ, ಸೊನಾಲ್ ಮೊಂತೆರೋ
ನಿರ್ದೇಶನ: ಯೋಗರಾಜ್ ಭಟ್
ನಿರ್ಮಾಣ: ಹರಿಪ್ರಸಾದ್ ಜಯಣ್ಣ, ಹೇಮಂತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News