ಸಿಪಿಐ ವಿರುದ್ಧ ರಾಹುಲ್ ಸ್ಪರ್ಧಿಸಿದರೆ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಧಕ್ಕೆ: ಡಿ. ರಾಜಾ
ಹೊಸದಿಲ್ಲಿ, ಮಾ. 31: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸಿಪಿಐ ಎದುರು ಸ್ಪರ್ಧಿಸಿದರೆ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಧಕ್ಕೆಯಾಗಲಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಎಚ್ಚರಿಸಿದ್ದಾರೆ.
ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವ ವದಂತಿ ಬಗ್ಗೆ ಕೇಳಿದಾಗ, "ಕಾಂಗ್ರೆಸ್ ಈ ಮೊದಲು ಅವರ ಉಮೇದುವಾರಿಕೆ ಘೋಷಿಸಿರಲಿಲ್ಲ. ಆದರೆ ಅದು ವದಂತಿಗಳಿಗೆ ತೆರೆ ಹಾಕಬೇಕು. ಕೇರಳದ ಯಾರಾದರೂ ಸಿಪಿಐ ವಿರುದ್ಧ ಸ್ಪರ್ಧಿಸಿದರೆ ಬೇರೆ ವಿಚಾರ; ಆದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಡಪಕ್ಷದ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದರೆ, ದೇಶಕ್ಕೆ ಯಾವ ಸಂದೇಶ ರವಾನೆಯಾಗುತ್ತದೆ ಎನ್ನುವುದನ್ನು ಅವರು ಪರಿಗಣಿಸಬೇಕು. ಕೇರಳ ಉತ್ತಮವೇ ಎನ್ನುವುದನ್ನು ಅವರು ಯೋಚಿಸಬೇಕು" ಎಂದು ಹೇಳಿದರು.
ರಾಹುಲ್ ಸ್ಪರ್ಧೆಯಿಂದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಧಕ್ಕೆಯಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಯಾರ ವಿರುದ್ಧ ಹೋರಾಟ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಬೇಕಾಗುತ್ತದೆ. ಕೇರಳದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಪರಸ್ಪರ ವಿರೋಧ ಪಕ್ಷಗಳು. ಪ್ರಜ್ಞಾಪೂರ್ವಕಾಗಿಯೋ ಅಲ್ಲವೋ ಕಾಂಗ್ರೆಸ್ ಪಕ್ಷ ಶಬರಿಮಲೆ ವಿಚಾರದಲ್ಲಿ ಬಿಜೆಪಿ ಪರವಾಗಿತ್ತು. ಇದು ಕೇವಲ ಚುನಾವಣಾ ಹೋರಾಟ ಮಾತ್ರವಲ್ಲದೇ ಸಾಮಾಜಿಕ- ರಾಜಕೀಯ ಹೋರಾಟ ಎನ್ನುವುದನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಿರೋಧಿ ಒಗ್ಗಟ್ಟು ಕೇವಲ ಭ್ರಮೆಯೇ ಎಂದು ಕೇಳಿದ ಪ್ರಶ್ನೆಗೆ, "ಖಂಡಿತಾ ಅಲ್ಲ. ಮಹಾಮೈತ್ರಿ ಏರ್ಪಡುತ್ತದೆ ಎಂದು ನಾವು ಎಲ್ಲೂ ಹೇಳಿಲ್ಲ. ಅದು ಮಾಧ್ಯಮದ ಸೃಷ್ಟಿ. ವಾಸ್ತವಿಕ ನೆಲೆಗಟ್ಟಿನಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿಯನ್ನು ಸೋಲಿಸಿ ದೇಶ ಹಾಗೂ ಸಂವಿಧಾನವನ್ನು ರಕ್ಷಿಸುವುದು ನಮ್ಮ ಉದ್ದೇಶ" ಎಂದು ಸ್ಪಷ್ಟಪಡಿಸಿದರು.
"ಎಡಪಕ್ಷಗಳ ಬಲ ಕುಗ್ಗಿರುವುದು ನಿಜ; ಆದರೆ ಹಲವು ರಾಜ್ಯಗಳಲ್ಲಿ ಈ ಬಾರಿ ಉತ್ತಮ ಸಾಧನೆಯ ನಿರೀಕ್ಷೆಯಲ್ಲಿದ್ದೇವೆ. ನಾವು ಕಾರ್ಯತಂತ್ರಗಳ ಪುನರಾವಲೋಕನ ನಡೆಸಿ, ಸಂಘಟನೆ ಪುನಶ್ಚೇತನಗೊಳಿಸಬೇಕಿದೆ. ಜನರ ಜತೆ ಮರು ಸಂಪಕ್ ಬೆಳೆಸಿಕೊಳ್ಳಬೇಕಿದೆ. ಶ್ರಮಿಕ ವರ್ಗದ ಪಾತ್ರ ಮತ್ತು ಅಗತ್ಯತೆಗಳೂ ಬದಲಾಗಿವೆ. ಬಹುಪಕ್ಷಗಳ ಪ್ರಜಾಪ್ರಭುತ್ವದಲ್ಲಿ, ಜಾತಿ, ಧರ್ಮ ಹಾಗೂ ಪ್ರದೇಶದ ಆಧಾರದಲ್ಲಿ ಗೆಲ್ಲಲು ಪಕ್ಷಗಳು ಯತ್ನಿಸುತ್ತಿವೆ. ಈ ಬಗ್ಗೆ ಜನಜಾಗೃತಿ ಮೂಡಿಸುವುದು ನಮ್ಮ ಗುರಿ. ಮಾರ್ಕ್ಸ್ ಹಾಗೂ ಅಂಬೇಡ್ಕರ್, ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದ್ದಾರೆ" ಎಂದು ಪ್ರತಿಪಾದಿಸಿದರು.