×
Ad

ಶಾಲಾ ಫೀಸು ಪಾವತಿಸದ ತಪ್ಪಿಗೆ 2ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ

Update: 2019-03-31 10:45 IST

ತಿರುವನಂತಪುರ, ಮಾ.31: ಶಾಲಾ ಶುಲ್ಕ ಪಾವತಿಸದ ತಪ್ಪಿಗೆ  ಓರ್ವ ಅಂಧ ವಿದ್ಯಾರ್ಥಿ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಎರಡು ಗಂಟೆಗಳ ಕಾಲ ಹೊರಗಡೆ ಧಗಧಗನೆ ಉರಿಯುವ ಬಿಸಿಲಿನಲ್ಲಿ ನಿಲ್ಲಿಸಿದ ಅಮಾನವೀಯ ಘಟನೆ ಕೇರಳದ ಆಲುವಾದಲ್ಲಿ ನಡೆದಿದೆ.

ಈ ಪೈಕಿ ಓರ್ವ ವಿದ್ಯಾರ್ಥಿ ಬಿಸಿಲಿನ ಬೇಗೆ ತಾಳಲಾರದೆ ಕುಸಿದು ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಲುವಾದ ಕರುಮಲ್ಲೂರು ಅನುದಾನರಹಿತ ಪ್ರಾಥಮಿಕ ಶಾಲೆಯಲ್ಲಿ ಈ  ಘಟನೆ ನಡೆದಿದ್ದು,  ಆ ಶಾಲೆಯ  ಎರಡನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಶಾಲಾ ಶುಲ್ಕದ ಕೊನೆಯ ಕಂತು ಪಾವತಿಸದ   ಕಾರಣಕ್ಕಾಗಿ ಅವರಿಗೆ ಶಾಲಾಡಳಿತ ಸಮಿತಿಯು ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಿಲ್ಲ. ಅಷ್ಟು ಮಾತ್ರವಲ್ಲ ಅವರನ್ನು ಶಾಲೆಯ ತರಗತಿ ಹೊರಗಡೆ ಎರಡು ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಲಾಯಿತು   ಎಂದು ತಿಳಿದು ಬಂದಿದೆ.

ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿ ಬಿಸಿಲಿನ ಬೇಗೆ ತಾಳಲಾರದೆ ತಲೆ ತಿರುಗಿ ಬಿದ್ದಿದ್ದಾನೆ. ಅವನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು .  ಪತ್ರಿಕೆಗಳಲ್ಲಿ ಈ ಘಟನೆಯ ವರದಿ ಪ್ರಕಟವಾದ ಬೆನ್ನಲ್ಲೇ ಕೇರಳದ ಮಾನವ ಹಕ್ಕುಗಳ ಆಯೋಗವು ಶಾಲಾ ಆಡಳಿತ  ಸಮಿತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, . ಘಟನೆಗೆ ಸಂಬಂಧಿಸಿ ರಾಜ್ಯ ವರದಿ ನೀಡುವಂತೆ ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News