ರಾಹುಲ್ ಸ್ಪರ್ಧೆ ಸಿಪಿಎಂ ವಿರುದ್ಧ, ನಾವು ಅವರನ್ನು ಮಣಿಸುತ್ತೇವೆ: ಪಿಣರಾಯಿ ವಿಜಯನ್

Update: 2019-03-31 15:53 GMT

ತಿರುವನಂತಪುರ,ಮಾ.31: ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ವಯನಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ ಎಂದು ಕಾಂಗ್ರೆಸ್ ರವಿವಾರ ಘೋಷಿಸಿದ ಬೆನ್ನಿಗೇ ಪ್ರತಿಕ್ರಿಯಿಸಿರುವ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ರಾಹುಲ್ ಸ್ಪರ್ಧೆಯು ಎಡರಂಗದ ವಿರುದ್ಧ ಹೋರಾಟವಾಗಿದೆಯೇ ಹೊರತು ಬಿಜೆಪಿ ವಿರುದ್ಧವಲ್ಲ ಎಂದು ಪರಿಗಣಿಸಬಹುದಾಗಿದೆ ಮತ್ತು ಎ.23ರಂದು ನಡೆಯಲಿರುವ ಚುನಾವಣೆಯಲ್ಲಿ ಎಡರಂಗವು ಅವರನ್ನು ಪರಾಭವಗೊಳಿಸಲಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯನ್,ರಾಜ್ಯದಿಂದ ಕಾಂಗ್ರೆಸ್ ಅಧ್ಯಕ್ಷರ ಸ್ಪರ್ಧೆಗೆ ವಿಶೇಷ ಮಹತ್ವವನ್ನೇನೂ ನೀಡಬೇಕಿಲ್ಲ ಮತ್ತು ರಾಹುಲ್ ಕೇರಳದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿರುವ ಪ್ರತಿಪಕ್ಷ ಯುಡಿಎಫ್‌ನ 20 ಅಭ್ಯರ್ಥಿಗಳಲ್ಲೋರ್ವರಾಗಿದ್ದಾರೆ,ಅಷ್ಟೇ ಎಂದರು.

ರಾಹುಲ್ ಹೋರಾಟ ಬಿಜೆಪಿಯ ವಿರುದ್ಧವಾಗಿದ್ದರೆ ಅವರು ಆ ಪಕ್ಷದ ವಿರುದ್ಧ ಸ್ಪರ್ಧಿಸಬೇಕಿತ್ತು. ಕೇರಳದಲ್ಲಿ ಚುನಾವಣಾ ಹೋರಾಟ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಮಾತ್ರ ನಡೆಯುತ್ತದೆ ಎಂದರು.

ರಾಹುಲ್ ವಯನಾಡ್ ಜೊತೆಗೆ ತನ್ನ ಸ್ವಂತ ಕ್ಷೇತ್ರ ಉತ್ತರ ಪ್ರದೇಶದ ಅಮೇಠಿಯಿಂದಲೂ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಗಳ ಬಳಿಕ ತಾನು ಅಮೇಠಿ ಕ್ಷೇತ್ರವನ್ನು ಉಳಿಸಿಕೊಳ್ಳುವುದಾಗಿ ಅವರು ಈ ಹಿಂದೆ ಹೇಳಿದ್ದರು.

ಈ ನಡೆಯ ಮೂಲಕ ಕಾಂಗ್ರೆಸ್ ಜನರಿಗೆ ಯಾವ ಸಂದೇಶವನ್ನು ರವಾನಿಸುತ್ತಿದೆ ಎಂಬ ಪ್ರಶ್ನೆಗೆ ವಿಜಯನ್,ರಾಹುಲ್ ಅಮೇಠಿಯ ಸಂಸದರಾಗಿ ಮುಂದುವರಿಯುತ್ತಾರೆ ಮತ್ತು ಎಡರಂಗವನ್ನು ಸೋಲಿಸಲು ತನಗೆ ಸಾಧ್ಯವೇ ಎನ್ನುವುದನ್ನು ಅವರು ವಯನಾಡಿನಲ್ಲಿ ಪರೀಕ್ಷಿಸುತ್ತಿದ್ದಾರೆ ಎಂದು ಉತ್ತರಿಸಿದರು.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ನೊಂದಿಗೆ ಉದ್ದೇಶಿತ ಚುನಾವಣೋತ್ತರ ಮೈತ್ರಿಯ ಕುರಿತು ಕೇಳಿದಾಗ,ಅದು ಚುನಾವಣೆಗಳ ಬಳಿಕ ಯೋಚಿಸಬೇಕಾದ ವಿಷಯವಾಗಿದೆ ಎಂದು ಅವರು ಹೇಳಿದರು.

ರಾಹುಲ್‌ರನ್ನು ವಯನಾಡಿನಿಂದ ಸ್ಪರ್ಧೆಗಿಳಿಸುವ ಕಾಂಗ್ರೆಸ್ ನಿರ್ಧಾರವು ಅದರ ಅವನತಿಯನ್ನು ಸೂಚಿಸುತ್ತಿದೆ ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರು,ಅಮೇಠಿಯಲ್ಲಿ ತಾನು ಸೋಲುತ್ತೇನೆ ಎಂದು ಗೊತ್ತಾದ ಬಳಿಕ ವಯನಾಡಿನಿಂದ ಸ್ಪರ್ಧಿಸಲು ರಾಹುಲ್ ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಬಿಜೆಪಿ ಕಠಿಣ ಹೋರಾಟವನ್ನು ನಡೆಸಲಿದೆ. ವಯನಾಡಿನಿಂದ ಅವರ ಸ್ಪರ್ಧೆಯನ್ನು ಕಾಂಗ್ರೆಸ್‌ನಿಂದ ಸೋಲಿನ ಸ್ವೀಕೃತಿ ಎಂದು ಪರಿಗಣಿಸಲಾಗಿದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ರಮೇಶ ಚೆನ್ನಿತ್ತಲ ಅವರು ವಯನಾಡಿನಿಂದ ರಾಹುಲ್ ಸ್ಪರ್ಧೆಯನ್ನು ಸ್ವಾಗತಿಸಿದ್ದಾರೆ. ಅರನ್ನು ಭಾರೀ ಅಂತರದಿಂದ ಗೆಲ್ಲಿಸುವುದು ಪಕ್ಷದ ಗುರಿಯಾಗಿದೆ ಎಂದ ಅವರು,ವಯನಾಡಿನಲ್ಲಿ ರಾಹುಲ್‌ರನ್ನು ಸೋಲಿಸುವಂತೆ ತಾನು ವಿಜಯನ್‌ಗೆ ಸವಾಲನ್ನೊಡ್ಡುತ್ತಿದ್ದೇನೆ ಎಂದರು. ರಾಹುಲ್ ವಯನಾಡಿನಲ್ಲಿ ಐತಿಹಾಸಿಕ ವಿಯವನ್ನು ಸಾಧಿಸಲಿದ್ದಾರೆ. ರಾಜ್ಯದಲ್ಲಿ ರಾಹುಲ್ ಅಲೆ ಸೃಷ್ಟಿಯಾಗಲಿದೆ. ಯುಡಿಎಫ್ ಎಲ್ಲ 20 ಸ್ಥಾನಗಳನ್ನೂ ಗೆಲ್ಲಲಿದೆ ಎಂದರು.

ರಾಹುಲ್‌ರನ್ನು ವಯನಾಡಿನಿಂದ ಕಣಕ್ಕಿಳಿಸುವ ನಿರ್ಧಾರವು ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಲಿಗೆ ಶುಭ ಸುದ್ದಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎಂ.ರಾಮಚಂದ್ರನ್ ಹೇಳಿದರು.

ಕಳೆದ ವರ್ಷದ ನವೆಂಬರ್‌ಲ್ಲ್ಲಿ ನಿಧನರಾದ ಕಾಂಗ್ರೆಸ ನಾಯಕ ಎಂ.ಐ.ಶಾನವಾಝ್ ಅವರು 2009 ಮತ್ತು 2014ರ ಚುನಾವಣೆಗಳಲ್ಲಿ ವಯನಾಡಿನಿಂದ ಗೆದ್ದಿದ್ದರು.

ಈ ಬಾರಿ ವಯನಾಡಿನಲ್ಲಿ ಸಿಪಿಐನ ಪಿ.ಪಿ.ಸುನೀರ್ ಅವರನ್ನು ಕಣಕ್ಕಿಳಿಸಲು ಎಡರಂಗ(ಎಲ್‌ಡಿಎಫ್)ವು ನಿರ್ಧರಿಸಿದೆ. ಬಿಜೆಪಿ-ಎನ್‌ಡಿಎ ತನ್ನ ಅಭ್ಯರ್ಥಿಯನ್ನು ಇನ್ನೂ ಪ್ರಕಟಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News