×
Ad

ಕಾಂಗ್ರೆಸ್ ನ ಕನಿಷ್ಠ ಆದಾಯ ಯೋಜನೆ ಜಾರಿಯಾದರೆ ಪತ್ನಿಗೆ ಜೀವನಾಂಶ ನೀಡುವುದಾಗಿ ನ್ಯಾಯಾಲಯಕ್ಕೆ ಹೇಳಿದ ಪತಿ ..: !

Update: 2019-03-31 15:14 IST

 ಭೋಪಾಲ್, ಮಾ.31: ಕಾಂಗ್ರೆಸ್ ಅಧ್ಯಕ್ಷ  ರಾಹುಲ್  ಗಾಂಧಿ  ಅವರು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ  ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಜೀವನ ನಿರ್ವಹಣೆಗೆ ಪ್ರತಿ  ತಿಂಗಳು 6,000 ರೂ. ಒದಗಿಸುವ ಕನಿಷ್ಠ ಆದಾಯ ಖಾತ್ರಿ ಯೋಜನೆ (ಎನ್ ವೈ  ಎವೈ)   ಜಾರಿಗೊಳಿಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಈ  ವಿಚಾರದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಇಂದೂರ್ ನ  ನಿರುದ್ಯೋಗಿಯೊಬ್ಬ ಈ ಯೋಜನೆಯನ್ನು ನೆಚ್ಚಿಕೊಂಡು ತನ್ನ ವಿಚ್ಚೇದಿತ ಪತ್ನಿ ಹಾಗೂ ಮಗಳಿಗೆ ಜೀವನಾಂಶ ನೀಡುವುದಾಗಿ ಸ್ಥಳೀಯ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾನೆ.

ನ್ಯಾಯಾಲಯವು ಆನಂದ ಶರ್ಮಾಗೆ ತನ್ನ ಪತ್ನಿದೀಪ್ ಮಾಲಾಗೆ 3 ಸಾವಿರೂ.  ಮತ್ತು ಮಗಳು ಆರ್ಯಗೆ 1,500 ನೀಡುವಂತೆ  ಆದೇಶ ನೀಡಿತ್ತು.

ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರಾದ ಆನಂದ ಶರ್ಮಾ  "ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲು ಮನಸ್ಸಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ನಾನು ನಿರುದ್ಯೋಗಿ. ರಾಹುಲ್ ಗಾಂಧಿ ಅವರ ಎನ್ ವೈ  ಎವೈ ಯೋಜನೆ ಜಾರಿಯಾದರೆ ತಿಂಗಳಿಗೆ 6 ಸಾವಿರ ರೂ. ಆದಾಯ ಬರುತ್ತದೆ. ಹೀಗಾದರೆ ನನಗೆ ನ್ಯಾಯಾಲಯದ ಆದೇಶದಂತೆ ಪತ್ನಿ ಮತ್ತು ಮಗಳಿಗೆ 4,500 ರೂ. ನೀಡಲು ಸಾಧ್ಯವಾಗುತ್ತದೆ" ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ. ಅಷ್ಟು ಮಾತ್ರವಲ್ಲದೆ ತನ್ನ ಬ್ಯಾಂಕ್ ಖಾತೆಯಿಂದ ನೇರವಾಗಿ ವಿಚ್ಛೇದಿತ ಪತ್ನಿಯ ಖಾತೆಗೆ ಹಣ ವರ್ಗಾಯಿಸಲು  ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.

ನ್ಯಾಯಾಲಯವು ಈತನ ಮನವಿಯನ್ನು ಸ್ವೀಕರಿಸಿದ್ದು, ಎಪ್ರಿಲ್ 29ರಂದು ಮುಂದಿನ ವಿಚಾರಣೆ ನಿಗದಿಪಡಿಸಿದೆ.   ಆನಂದ್ ಮತ್ತು ದೀಪ್ ಮಾಲಾ 2006ರಲ್ಲಿ ಮದುವೆಯಾಗಿದ್ದರು.  ಬಳಿಕ ದೀಪ್ ಮಾಲಾ  ವಿವಾಹ ವಿಚ್ಚೇದನಕ್ಕೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಳು. ವಿಚ್ಛೇದನ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜೀವನಾಂಶ ನೀಡುವಂತೆ ಕೋರ್ಟ್ ಆನಂದ್ ಶರ್ಮಾಗೆ ಸೂಚಿಸಿತ್ತು. 

ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರಿಗೆ ವಾರ್ಷಿಕ 6,000 ರೂ. ಪಿಂಚಣಿ ನೀಡುವುದಾಗಿ ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡಕುಟುಂಬಗಳಿಗೆ ವರ್ಷಕ್ಕೆ 72,000 ರೂ. ನೆರವು ನೀಡುವ     ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಮಾರ್ಚ್ 25ರಂದು ಪ್ರಕಟಿಸಿದ್ದರು. ಈ  ಯೋಜನೆಯಿಂದ 25 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದು ರಾಹುಲ್  ಈ ಸಂದರ್ಭದಲ್ಲಿ ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News