ಅಮೆಝಾನ್ ಸಿಇಒ ಬೆಝೊಸ್‌ರ ಫೋನ್‌ಗೆ ಸೌದಿ ಅರೇಬಿಯ ಕನ್ನ

Update: 2019-03-31 16:30 GMT

ವಾಶಿಂಗ್ಟನ್, ಮಾ. 31: ಅಮೆಝಾನ್ ಮುಖ್ಯಸ್ಥ ಜೆಫ್ ಬೆಝೊಸ್‌ರ ಫೋನ್‌ಗೆ ಸೌದಿ ಅರೇಬಿಯವು ಕನ್ನ ಹಾಕಿ ಅವರ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡಿದೆ ಎಂಬುದಾಗಿ ಈ ಬಗ್ಗೆ ತನಿಖೆ ನಡೆಸಿದ ಗ್ಯಾವಿನ್ ಡಿ ಬೆಕರ್ ಶನಿವಾರ ಹೇಳಿದ್ದಾರೆ.

ಬೆಝೊಸ್‌ರ ಗುಪ್ತ ಚಿತ್ರಗಳು ಹೇಗೆ ಬಹಿರಂಗಗೊಂಡವು ಎಂಬ ಬಗ್ಗೆ ತನಿಖೆ ನಡೆಸಲು ಪರಿಣತರೊಬ್ಬರನ್ನು ನೇಮಿಸಲಾಗಿತ್ತು.

ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಕಳೆದ ವರ್ಷ ನಡೆದ ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಬಗ್ಗೆ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ವಿವರವಾದ ವರದಿಗಳು ಪ್ರಕಟವಾಗಿರುವುದಕ್ಕೆ ಪ್ರತೀಕಾರವಾಗಿ ಪತ್ರಿಕೆಯ ಮಾಲೀಕ ಬೆಝೊಸ್‌ರ ಫೋನ್‌ಗೆ ಕನ್ನ ಹಾಕಿ ಗೌಪ್ಯ ಮಾಹಿತಿಗಳನ್ನು ಹೊರಗೆಡವಲಾಗಿದೆ ಎಂಬುದಾಗಿ ಬೆಕರ್ ಹೇಳಿದ್ದಾರೆ.

‘‘ಬೆಝೊಸ್‌ರ ಫೋನ್‌ಗೆ ಸೌದಿ ಕನ್ನ ಹಾಕಿದೆ ಹಾಗೂ ಖಾಸಗಿ ಮಾಹಿತಿಗಳನ್ನು ಕದ್ದಿದೆ ಎಂಬ ದೃಢ ನಿರ್ಧಾರಕ್ಕೆ ನಮ್ಮ ತನಿಖೆಗಾರರು ಮತ್ತು ಹಲವಾರು ಪರಿಣತರು ಬಂದಿದ್ದಾರೆ’’ ಎಂದು ‘ದ ಡೇಲಿ ಬೀಸ್ಟ್’ ವೆಬ್‌ಸೈಟ್‌ನಲ್ಲಿ ಬೆಕರ್ ಬರೆದಿದ್ದಾರೆ.

‘‘ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ‘ದ ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯನ್ನು ದೊಡ್ಡ ಶತ್ರು ಎಂಬುದಾಗಿ ಪರಿಗಣಿಸಿರುವುದು ಸ್ಪಷ್ಟವಾಗಿದೆ’’ ಎಂದು ಬೆಕರ್ ಹೇಳಿದ್ದಾರೆ.

ಖಶೋಗಿ ಹತ್ಯೆಯ ಹೊಣೆಯನ್ನು ಅಮೆರಿಕದ ಸೆನೆಟ್ ಮುಹಮ್ಮದ್ ಬಿನ್ ಸಲ್ಮಾನ್ ಮೇಲೆ ಹೊರಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News