ಬಿಜೆಪಿ ಹಾಲಿ ಸಂಸದ, ಹೊಸ ಅಭ್ಯರ್ಥಿಯ ಬೆಂಬಲಿಗರ ಮಧ್ಯೆ ಘರ್ಷಣೆ

Update: 2019-04-01 14:17 GMT

ಭೋಪಾಲ, ಎ.1: ಮಧ್ಯಪ್ರದೇಶದ ಬಾಲಘಾಟ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಿಷಯದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಹಾಲಿ ಸಂಸದ ಹಾಗೂ ಟಿಕೆಟ್ ಪಡೆದ ಅಭ್ಯರ್ಥಿಯ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.

ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಹಾಲಿ ಸಂಸದ ಬೋಧ್‌ಸಿಂಗ್ ಭಗತ್ ಬೆಂಬಲಿಗರು ಪ್ರತಿಭಟನೆ ನಡೆಸಿದಾಗ ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಬಾಲಘಾಟ್ ಕ್ಷೇತ್ರದಲ್ಲಿ ಹಾಲಿ ಸಂಸದ ಬೋಧ್‌ಸಿಂಗ್ ಭಗತ್ ಬದಲಿಗೆ ಈ ಬಾರಿ ಬಿಜೆಪಿಯಿಂದ ಧಾಲ್‌ಸಿಂಗ್ ಬೈಸೆನ್‌ಗೆ ಟಿಕೆಟ್ ನೀಡಲಾಗಿದೆ. ಇದರಿಂದ ಆಕ್ರೋಶಗೊಂಡ ಬೋಧ್‌ಸಿಂಗ್ ಭಗತ್ ಬೆಂಬಲಿಗರು ಸ್ಥಳೀಯ ಬಿಜೆಪಿ ಕಚೇರಿಗೆ ಬೀಗ ಜಡಿದರು.

 ಸ್ಥಳಕ್ಕೆ ಧಾವಿಸಿದ ಬಿಜೆಪಿ ಶಾಸಕ ಗೌರಿಶಂಕರ್ ಬೈಸೆನ್ ಬೀಗ ಒಡೆದು ಕಚೇರಿಯ ಕಾರ್ಯಕಲಾಪಕ್ಕೆ ಅನುವು ಮಾಡಿಕೊಟ್ಟರು. ಈ ಮಧ್ಯೆ, ಭಗತ್ ಹಾಗೂ ಬೈಸೆನ್ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದಿದ್ದು ಭಗತ್ ಬೆಂಬಲಿಗರು ಪ್ರತಿಭಟನೆ ನಡೆಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಪಕ್ಷದ ನಾಯಕರಿಗೆ ವರದಿ ಸಲ್ಲಿಸುವುದಾಗಿ ಬಾಲಘಾಟ್ ಬಿಜೆಪಿ ಅಧ್ಯಕ್ಷ ರಮೇಶ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News