ಗುಜರಾತ್: ತಲಾಲ ಉಪಚುನಾವಣೆ ಘೋಷಣೆಗೆ ಸುಪ್ರೀಂಕೋರ್ಟ್ ತಡೆ

Update: 2019-04-01 14:38 GMT

ಹೊಸದಿಲ್ಲಿ, ಎ.1: ಗುಜರಾತ್‌ನ ತಲಾಲ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಲೋಕಸಭಾ ಚುನಾವಣೆಯ ಜೊತೆಗೇ ನಡೆಸುವ ಚುನಾವಣಾ ಆಯೋಗದ ಅಧಿಸೂಚನೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

ಅನರ್ಹಗೊಂಡಿರುವ ಕಾಂಗ್ರೆಸ್ ಶಾಸಕ ಬಿ.ಡಿ ಬರಾದ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಸುಪ್ರೀಂಕೋರ್ಟ್‌ನ ನ್ಯಾಯಪೀಠವು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ. ತನ್ನನ್ನು ಅನರ್ಹಗೊಳಿಸಿರುವುದನ್ನು ಹಾಗೂ ಉಪಚುನಾವಣೆ ಘೋಷಿಸಿರುವುದನ್ನು ಬರಾದ್ ಅರ್ಜಿಯಲ್ಲಿ ಪ್ರಶ್ನಿಸಿದ್ದರು.

 ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬರಾದ್ ದೋಷಿ ಎಂದು ತೀರ್ಪು ನೀಡಿರುವ ಗುಜರಾತ್‌ನ ನ್ಯಾಯಾಲಯ ಅವರಿಗೆ ಎರಡು ವರ್ಷದ ಜೈಲುಶಿಕ್ಷೆ ವಿಧಿಸಿದೆ. ವಿಧಾನಸಭೆಯ ಸ್ಪೀಕರ್ ಮಾರ್ಚ್ 5ರಂದು ಬರಾದ್‌ರನ್ನು ಅನರ್ಹಗೊಳಿಸಿದ್ದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಲಾಗಿದೆ. ಇದನ್ನು ಪ್ರಶ್ನಿಸಿ ಬರಾದ್ ಗುಜರಾತ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News