ವಿವಿಪ್ಯಾಟ್ ಸ್ಲಿಪ್ ಬಳಕೆ: ಆಯೋಗದ ಅಫಿದಾವಿತ್‌ಗೆ ವಾರದೊಳಗೆ ಉತ್ತರಿಸುವಂತೆ ವಿಪಕ್ಷಗಳಿಗೆ ಸುಪ್ರೀಂ ಸೂಚನೆ

Update: 2019-04-01 14:40 GMT

ಹೊಸದಿಲ್ಲಿ, ಎ.1: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳ ಬಳಕೆ ಕುರಿತು ವಿಪಕ್ಷಗಳು ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೀಡಿದ್ದ ಅಫಿದಾವಿತ್‌ಗೆ ಒಂದು ವಾರದೊಳಗೆ ಉತ್ತರಿಸುವಂತೆ 21 ವಿಪಕ್ಷ ಮುಖಂಡರಿಗೆ ಸುಪ್ರೀಂಕೋರ್ಟ್ ತಿಳಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದ ಕನಿಷ್ಟ ಶೇ.50 ಮತಯಂತ್ರಗಳಿಗೆ ವಿವಿಪ್ಯಾಟ್ ಸ್ಲಿಪ್ ಬಳಸಬೇಕು ಹಾಗೂ ಇದನ್ನು ಅನಿಯಮಿತವಾಗಿ ಪರಿಶೀಲನೆ ನಡೆಸಬೇಕೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ವಿಪಕ್ಷ ಮುಖಂಡರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ವಿಪಕ್ಷಗಳ ನಿಲುವಿಗೆ ಯಾವುದೇ ವೈಜ್ಞಾನಿಕ ತರ್ಕ ಅಥವಾ ಅಂಕಿಅಂಶಗಳ ಆಧಾರವಿಲ್ಲ ಎಂದು ತಿಳಿಸಿತ್ತು. ಪ್ರತೀ ವಿಧಾನಸಭಾ ಕ್ಷೇತ್ರದ ಒಂದು ಮತದಾನ ಕೇಂದ್ರದಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳನ್ನು ಅನಿಯಮಿತವಾಗಿ ಪರಿಶೀಲಿಸುವ ಹಾಲಿ ವ್ಯವಸ್ಥೆಯ ಬದಲಾವಣೆ ಆಗ್ರಹಿಸುತ್ತಿರುವ ವಿಪಕ್ಷಗಳು ಇದಕ್ಕೆ ಸಮಂಜಸವಾದ ಕಾರಣ ನೀಡಿಲ್ಲ. ಅಲ್ಲದೆ ಶೇ.50 ವಿವಿಪ್ಯಾಟ್ ಸ್ಲಿಪ್‌ಗಳ ಪರಿಶೀಲನೆಯಲ್ಲಿ ವ್ಯವಸ್ಥಾಪನೆಯ ಸಮಸ್ಯೆ ಎದುರಾಗಲಿದೆ ಮತ್ತು ಇದರಿಂದ ಫಲಿತಾಂಶ ಘೋಷಿಸುವಲ್ಲಿ ಕನಿಷ್ಟ 6 ದಿನಗಳಷ್ಟು ವಿಳಂಬವಾಗಲಿದೆ ಎಂದು ಅಫಿದಾವಿತ್‌ನಲ್ಲಿ ತಿಳಿಸಿತ್ತು.

 ಕಾಂಗ್ರೆಸ್, ಟಿಡಿಪಿ, ಎನ್‌ಸಿಪಿ, ಆಮ್ ಆದ್ಮಿ ಪಕ್ಷ, ಸಿಪಿಐ, ಸಿಪಿಎಂ, ಟಿಎಂಸಿ, ನ್ಯಾಷನಲ್ ಕಾನ್ಫರೆನ್ಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಲೋಕದಳ, ಲೋಕತಾಂತ್ರಿಕ ಜನತಾದಳ, ಡಿಎಂಕೆ ಸಹಿತ 21 ಪಕ್ಷಗಳ ಮುಖಂಡರು ಸುಪ್ರೀಂಗೆ ಸರ್ಜಿ ಸಲ್ಲಿಸಿದ್ದರು. ಇವಿಎಂಗಳಲ್ಲಿ ಹಸ್ತಕ್ಷೇಪ ನಡೆಸುವುದನ್ನು ತಡೆಯಲು ಕಠಿಣ ನಿಯಮ ರೂಪಿಸಬೇಕೆಂದು ಪಕ್ಷಗಳು ಒತ್ತಾಯಿಸಿದ್ದವು. ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಕಳೆದ 2 ವರ್ಷಗಳಲ್ಲಿ ವಿಪಕ್ಷಗಳು ಹಲವಾರು ಬಾರಿ ಪ್ರಶ್ನಿಸಿದ್ದವು. ಆದರೆ ಇವಿಎಂಗಳಲ್ಲಿ ಹಸ್ತಕ್ಷೇಪ ನಡೆಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಪುನರುಚ್ಚರಿಸಿದೆ. ಬ್ಯಾಲೆಟ್ ಪೇಪರ್ ಯುಗಕ್ಕೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಜನವರಿ 24ರಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News