ಮೋದಿ ಜೀವನಚರಿತ್ರೆ ಆಧಾರಿತ ಸಿನೆಮ ವಿವಾದ: ಮಧ್ಯಪ್ರವೇಶಿಸಲು ಹೈಕೋರ್ಟ್ ನಕಾರ

Update: 2019-04-01 14:42 GMT

ಮುಂಬೈ, ಎ.1: ಪ್ರಧಾನಿ ನರೇಂದ್ರ ಮೋದಿ ಜೀವನಚರಿತ್ರೆ ಆಧಾರಿತ, ವಿವೇಕ್ ಒಬೆರಾಯ್ ತಾರಾಗಣದ ‘ಪಿಎಂ ನರೇಂದ್ರ ಮೋದಿ’ ಸಿನೆಮದ ಬಿಡುಗಡೆ ವಿಷಯದಲ್ಲಿ ಮಧ್ಯಪ್ರವೇಶಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.

 ಲೋಕಸಭಾ ಚುನಾವಣೆಯ ಕಾರಣ ಮೋದಿ ಜೀವನಚರಿತ್ರೆಯ ಸಿನೆಮ ಬಿಡುಗಡೆ ನೀತಿ ಸಂಹಿತೆಯ ಉಲ್ಲಂಘನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ‘ಪಿಎಂ ನರೇಂದ್ರ ಮೋದಿ’ ಸಿನೆಮದ ನಿರ್ಮಾಪಕರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ.

ಈ ವಿಷಯದ ಬಗ್ಗೆ ಆಯೋಗ ಗಮನ ಹರಿಸಿದ್ದು ಆಯೋಗ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಈಗ ಸಿನೆಮ ಬಿಡುಗಡೆಯಾದರೆ ಅದರಿಂದ ಪ್ರಧಾನಿ ಮೋದಿಗೆ ಚುನಾವಣೆಯಲ್ಲಿ ಅನುಕೂಲವಾಗಲಿದೆ. ಅಲ್ಲದೆ ಇದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಎಪ್ರಿಲ್ 5ರಂದು ನಿಗದಿಯಾಗಿರುವ ಸಿನೆಮದ ಬಿಡುಗಡೆಗೆ ತಡೆ ನೀಡಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಐ) ಅಧ್ಯಕ್ಷ ಸತೀಶ್ ಗಾಯಕ್‌ವಾಡ್ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಿದ್ದರು.

ಸಿನೆಮದ ಟ್ರೈಲರ್ ಬಿಡುಗಡೆಗೆ ಮಾರ್ಚ್ 20ರಂದು ಅನುಮತಿ ನೀಡಲಾಗಿದೆ ಎಂದು ಸೆನ್ಸಾರ್ ಬೋರ್ಡ್‌ನ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಈಗಾಗಲೇ ಸಿನೆಮದ ನಿರ್ಮಾಪಕರಿಂದ ಉತ್ತರ ಕೇಳಲಾಗಿದೆ ಎಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿತು. ಬುಧವಾರ (ಎಪ್ರಿಲ್ 2ರಂದು) ಸಿನೆಮಾಕ್ಕೆ ಪ್ರಮಾಣಪತ್ರ ನೀಡುವ ಬಗ್ಗೆ ಪರಿಶೀಲನೆ ನಡೆಸಲಿದ್ದು ಎಲ್ಲಾ ಅಗತ್ಯ ಮಾನದಂಡಕ್ಕೆ ಅನುಗುಣವಾಗಿದ್ದರೆ ಬಿಡುಗಡೆಗೆ ಅನುಮತಿ ನೀಡಲಾಗುತ್ತದೆ ಎಂದು ಸೆನ್ಸಾರ್ ಮಂಡಳಿ ತಿಳಿಸಿದೆ. ಈಗಾಗಲೇ ಹಲವು ರಾಜಕಾರಣಿಗಳ ಜೀವನಚರಿತ್ರೆ ಸಾರ್ವಜನಿಕರ ವೀಕ್ಷಣೆಗೆ ಬಿಡುಗಡೆಗೊಂಡಿದೆ. ಆದ್ದರಿಂದ ಸಿನೆಮ ಬಿಡುಗಡೆಗೊಂಡರೆ ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲ ಎಂದು ಸಿನೆಮ ನಿರ್ಮಾಪಕರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News