ಚುನಾವಣೆಯಲ್ಲಿ ಸ್ಪರ್ಧಿಸಲು ತನ್ನ ದೋಷನಿರ್ಣಯ ರದ್ದುಗೊಳಿಸಲು ಸುಪ್ರೀಂಗೆ ಹಾರ್ದಿಕ್ ಮೊರೆ
ಹೊಸದಿಲ್ಲಿ,ಎ.1: ತಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವಂತೆ ತನ್ನ ದೋಷನಿರ್ಣಯವನ್ನು ತಡೆಹಿಡಿಯಲು ನಿರಾಕರಿಸಿರುವ ಗುಜರಾತ್ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರು ಸೋಮವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಲು ಎ.4 ಕೊನೆಯ ದಿನಾಂಕವಾಗಿರುವುದರಿಂದ ಈ ಕಾನೂನು ಸಮರ ಹಾರ್ದಿಕ್ ಪಾಲಿಗೆ ಕಾಲದ ವಿರುದ್ಧದ ಓಟವಾಗಿದೆ.
ಗುಜರಾತ್‌ನ ಮೆಹ್ಸಾನಾ ನ್ಯಾಯಾಲಯವು 2015ರಲ್ಲಿ ಪಾಟಿದಾರ್ ಮೀಸಲಾತಿ ಪ್ರತಿಭಟನೆಗಳ ಸಂದರ್ಭದಲ್ಲಿ ದಂಗೆ ಮತ್ತು ಬೆಂಕಿ ಹಚ್ಚುವಿಕೆ ಆರೋಪದಲ್ಲಿ ಹಾರ್ದಿಕ್ ದೋಷಿ ಎಂದು ಕಳೆದ ವರ್ಷದ ಜುಲೈನಲ್ಲಿ ಘೋಷಿಸಿ ಶಿಕ್ಷೆ ವಿಧಿಸಿತ್ತು.
2018,ಆಗಸ್ಟ್‌ನಲ್ಲಿ ಉಚ್ಚ ನ್ಯಾಯಾಲಯವು ಹಾರ್ದಿಕ್‌ರ ಶಿಕ್ಷೆಯನ್ನು ಅಮಾನತುಗೊಳಿಸಿತ್ತು,ಆದರೆ ದೋಷನಿರ್ಣಯವನ್ನು ಅಮಾನತುಗೊಳಿಸಿರಲಿಲ್ಲ. ದೋಷನಿರ್ಣಯವನ್ನು ರದ್ದುಗೊಳಿಸಲು ಅದು ಶುಕ್ರವಾರ ನಿರಾಕರಿಸಿತ್ತು.
ಜನತಾ ಪ್ರಾತಿನಿಧ್ಯ ಕಾಯ್ದೆಯಂತೆ ದೋಷನಿರ್ಣಯಕ್ಕೆ ತಡೆಯಾಜ್ಞೆ ದೊರೆಯದಿದ್ದರೆ ಎರಡು ಅಥವಾ ಅಥವಾ ಅದಕ್ಕೂ ಹೆಚ್ಚಿನ ಜೈಲುಶಿಕ್ಷೆಯನ್ನು ಎದುರಿಸುತ್ತಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
“ನಾನು ಬಿಜೆಪಿ ಎದುರು ಮಣಿಯಲಿಲ್ಲ ಎನ್ನುವುದು ನನ್ನ ಏಕಮಾತ್ರ ತಪ್ಪು. ಇದು ಸರಕಾರದ ವಿರುದ್ಧ ಹೋರಾಟದ ಫಲಶ್ರುತಿಯಾಗಿದೆ” ಎಂದು ಶುಕ್ರವಾರ ಉಚ್ಚ ನ್ಯಾಯಾಲಯವು ತನ್ನ ಅರ್ಜಿಯನ್ನು ನಿರಾಕರಿಸಿದ ಬಳಿಕ ಹೇಳಿದ್ದ ಹಾರ್ದಿಕ್,ತಾನು ದೇಶಾದ್ಯಂತ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸುವುದಾಗಿ ತಿಳಿಸಿದ್ದರು. ಮೀಸಲಾತಿ ಹೋರಾಟದ ನಾಯಕತ್ವ ವಹಿಸಿದ್ದ ಅವರು ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರಿದ್ದಾರೆ.