ಗುಂಡು ಹಾರಾಟ: ತಮಿಳುನಾಡಿನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಹರ್ಯಾಣ ಐಜಿಪಿ ಅಮಾನತು
Update: 2019-04-01 20:51 IST
ಚಂಡಿಗಡ,ಎ.1: ಕಾನಸ್ಟೇಬಲ್‌ವೋರ್ವನ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಕ್ಕಾಗಿ ತಮಿಳುನಾಡಿನ ಅರಿಯಾಲೂರಿನಲ್ಲಿ ಚುನಾವಣಾ ವೀಕ್ಷಕರಾಗಿ ನಿಯೋಜಿತಗೊಂಡಿದ್ದ ಐಜಿಪಿ ಹೇಮಂತ ಕಲ್ಸಾನ್ ಅವರನ್ನು ಹರ್ಯಾಣ ಸರಕಾರವು ಸೋಮವಾರ ಸೇವೆಯಿಂದ ಅಮಾನತುಗೊಳಿಸಿದೆ.
2001ರ ತಂಡದ ಆಧಿಕಾರಿಯಾಗಿರುವ ಕಲ್ಸಾನ್ ಅವರನ್ನು ತಮಿಳುನಾಡಿನಲ್ಲಿ ಎ.18ರಂದು ನಡೆಯಲಿರುವ ಲೋಕಸಭಾ ಚುನಾವಣಾ ಕರ್ತವ್ಯಕ್ಕಾಗಿ ಕಳುಹಿಸಲಾಗಿತ್ತು.
ರವಿವಾರ ಈ ಘಟನೆ ನಡೆದಿದ್ದು,ಮದ್ಯದ ನಶೆಯಲ್ಲಿದ್ದರು ಎಂದು ಶಂಕಿಸಲಾಗಿರುವ ಕಲ್ಸಾನ್ ಅಲ್ಲಿ ನಿಯೋಜಿತ ಕಾನ್‌ಸ್ಟೇಬಲ್ ಬಳಿಯಿದ್ದ ಸೆಮಿ ಆಟೊಮ್ಯಾಟಿಕ್ ಗನ್ ಅನ್ನು ಕೇಳಿ ಪಡೆದುಕೊಂಡಿದ್ದರು. ಬಳಿಕ ತಾನು ತಂಗಿದ್ದ ಅರಿಯಾಲೂರಿನ ಸರ್ಕ್ಯೂಟ್ ಹೌಸ್ ಬಳಿಯ ರಸ್ತೆಯಲ್ಲಿ ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದರು.
ಐಜಿಪಿ ಹೇಮಂತ ಕಲ್ಸಾನಾ ಅವರನ್ನು ತಕ್ಷಣದಿಂದಲೇ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಚಂಡಿಗಡದಲ್ಲಿ ಹೊರಡಿಲಾದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.