ನೀವು ಜೇಟ್ಲಿಯ ಚಮಚಾಗಿರಿ ಮಾಡುತ್ತೀರಿ, ಅರ್ಥಶಾಸ್ತ್ರ ಗೊತ್ತಿದ್ದ ಏಕೈಕ ವಿತ್ತಮಂತ್ರಿ ಮನಮೋಹನ್ ಸಿಂಗ್

Update: 2019-04-01 15:36 GMT

#ಕೇಂದ್ರ ಸರಕಾರದ ಆರ್ಥಿಕ ವೈಫಲ್ಯಗಳ ಬಗ್ಗೆ ಜನರಿಗೆ ದೂರಿದೆ ಎಂದ ಬಿಜೆಪಿ ಸಂಸದ

ಹೊಸದಿಲ್ಲಿ, ಎ.1 : ಮೋದಿ ಸರಕಾರದ ಆರ್ಥಿಕ ವೈಫಲ್ಯಗಳ ಬಗ್ಗೆ ಜನರಿಗೆ ಬೇಸರ ಇದೆ ಎಂದು ಒಪ್ಪಿಕೊಂಡಿರುವ ಹಿರಿಯ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣ್ಯನ್ ಸ್ವಾಮಿ ಅರುಣ್ ಜೇಟ್ಲಿಗೆ ಅರ್ಥಶಾಸ್ತ್ರ ಗೊತ್ತೇ ಇಲ್ಲ ಎಂದು ಕಿಡಿಕಾರಿದ್ದಾರೆ. ‘ಝೀ ನ್ಯೂಸ್ ನಡೆಸಿದ ಇಂಡಿಯಾ ಕಾ ಡಿ ಎನ್ ಎ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮೋದಿ ಸರಕಾರದ ಒಟ್ಟಾರೆ ಆರ್ಥಿಕ ನಿರ್ವಹಣೆ ಸರಿಯಾಗಿಲ್ಲ ಎಂದು ಹೇಳಿದ ಸ್ವಾಮಿ, “ತೆರಿಗೆ ಹೆಚ್ಚಿಸಲಾಯಿತು. ನೋಟು ರದ್ದತಿ ಒಳ್ಳೆಯ ನಿರ್ಧಾರವಾಗಿದ್ದರೂ ಅದಕ್ಕೆ ಸರಿಯಾದ ತಯಾರಿ ಮಾಡಿಕೊಳ್ಳಲಿಲ್ಲ. ಮೊದಲೇ ಹೊಸ ನೋಟು ಮುದ್ರಣ ಮಾಡಲಿಲ್ಲ. ಜಿಎಸ್ ಟಿಯನ್ನು ಸರಿಯಾಗಿ ಅನುಷ್ಠಾನ ಮಾಡಲಿಲ್ಲ. ಬಡ್ಡಿದರ ಏರಿಕೆಯಾಗುತ್ತಲೇ ಹೋಯಿತು. ಅರವಿಂದ್ ಸುಬ್ರಮಣ್ಯನ್ ( ಮೋದಿ ಸರಕಾರದ ಮಾಜಿ ಆರ್ಥಿಕ ಸಲಹೆಗಾರ ) ಅಮೇರಿಕಾದ ಔಷಧಿ ಕಂಪೆನಿಯ ಹಿತಕ್ಕಾಗಿ ಇಲ್ಲಿದ್ದರು. ಅವರಿಗೆ ಆ ಕಂಪೆನಿಯ ಮಾರಾಟ ಹೆಚ್ಚಿಸುವುದೇ ಮುಖ್ಯವಾಗಿತ್ತು. ಒಟ್ಟಾರೆ ಜನರಿಗೆ ಇದರಿಂದ ಬಹಳ ಅನಾನುಕೂಲ ಆಯಿತು. ಇದಕ್ಕಾಗಿ ಜನರು ನೊಂದುಕೊಂಡಿದ್ದಾರೆ. ಜೇಟ್ಲಿಗೂ ಅರ್ಥಶಾಸ್ತ್ರ ಗೊತ್ತಿರಲಿಲ್ಲ, ಚಿದಂಬರಂಗೂ ಗೊತ್ತಿರಲಿಲ್ಲ. ಈ ದೇಶದಲ್ಲಿ ಅರ್ಥಶಾಸ್ತ್ರ ಗೊತ್ತಿದ್ದ ಏಕೈಕ ವಿತ್ತ ಸಚಿವ ಡಾ ಮನಮೋಹನ್ ಸಿಂಗ್” ಎಂದು ಸ್ವಾಮಿ ಹೇಳಿದ್ದಾರೆ.

ಅರುಣ್ ಜೇಟ್ಲಿ ಬಗ್ಗೆ ನಿಮಗೇಕೆ ಇಷ್ಟು ದ್ವೇಷ ಎಂದು ಮತ್ತೆ ಮತ್ತೆ ಕೇಳಿದಾಗ ಕೆರಳಿದ ಸ್ವಾಮಿ "ನನಗೆ ಆತನ ಪರಿಚಯವೇ ಇಲ್ಲ . ನೀವೇನು  ಜೇಟ್ಲಿಯ ಚಮಚಾವೇ ?, ನೀವು ಬಡ್ತಿಗಾಗಿ ಜೇಟ್ಲಿಯ ಚಮಚಾಗಿರಿ ಮಾಡುತ್ತಿದ್ದೀರಿ. ನಿಮಗೆಲ್ಲ ಇದೇ ಅಭ್ಯಾಸವಾಗಿಬಿಟ್ಟಿದೆ" ಎಂದು ಝಾಡಿಸಿದ್ದಾರೆ.

ನೀವು ( ಟ್ವಿಟರ್ ನಲ್ಲಿ ) ಚೌಕಿದಾರ ಏಕೆ ಅಗಿಲ್ಲ ಎಂದು ಪ್ರಶ್ನಿಸಿದ್ದಕ್ಕೆ "ನಾನು ಚೌಕಿದಾರ ಆಗಲಾರೆ. ನಾನು ಬ್ರಾಹ್ಮಣ. ಅಂದರೆ ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲ. ಯಾರೂ ಹಾಗೆ ಅಗಲೂಬಾರದು. ಸಂಸ್ಕಾರದಿಂದ ಬ್ರಾಹ್ಮಣ. ನಾನು ಯಾರನ್ನೂ ತಪ್ಪು ಮಾಡದಂತೆ ತಡೆಯುವ ಚೌಕಿದಾರ ಆಗಲಾರೆ. ನಾನು ತಪ್ಪು ಮಾಡಿದವನಿಗೆ ಏನು ಶಿಕ್ಷೆ ಕೊಡಬಹುದು ಎಂದು ಹೇಳಬಲ್ಲೆ. ಅದು ನನ್ನ ಅರ್ಹತೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News