ಅಸ್ಸಾಂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸುಪ್ರೀಂ ತೀವ್ರ ತರಾಟೆ

Update: 2019-04-01 16:16 GMT

ಹೊಸದಿಲ್ಲಿ,ಎ.1: ಭಾರತವನ್ನು ಅಕ್ರಮವಾಗಿ ಪ್ರವೇಶಿಸಿರುವ ವಿದೇಶಿಯರ ಬಂಧನಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಅಸ್ಸಾಂ ಸರಕಾರದ ಮುಖ್ಯ ಕಾರ್ಯದರ್ಶಿಗಳನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತೀವ್ರ ತರಾಟೆಗೆತ್ತಿಕೊಂಡಿತು. ವಿಚಾರಣೆಗೆ ಮುಖ್ಯ ಕಾರ್ಯದರ್ಶಿಗಳ ಗೈರುಹಾಜರಿಯನ್ನು ಪ್ರಶ್ನಿಸಿದ ನ್ಯಾಯಾಲಯವು,ಎ.8ರಂದು ತನ್ನೆದುರು ಹಾಜರಾಗುವಂತೆ ಅವರಿಗೆ ಆದೇಶಿಸಿತು. ಅಸ್ಸಾಂ ಸರಕಾರವು ಸಲ್ಲಿಸಿದ ಅಫಿದಾವತ್ತನ್ನು ‘ವ್ಯರ್ಥ ಕಸರತ್ತು’ ಎಂದು ಬಣ್ಣಿಸಿದ ಸರ್ವೋಚ್ಚ ನ್ಯಾಯಾಲಯವು,ವಿದೇಶಿಯರ ನ್ಯಾಯಾಧಿಕರಣವು ವಿದೇಶಿಗಳೆಂದು ಘೋಷಿಸಿರುವ ಎಷ್ಟು ಜನರು ಸ್ಥಳೀಯರೊಂದಿಗೆ ಬೆರೆತಿದ್ದಾರೆ ಎನ್ನುವುದನ್ನು ತಿಳಿಯಲು ಬಯಸಿತು.

ನಾವು ಅನುಮತಿ ನೀಡಿದರೆ ಮಾತ್ರ ಮುಖ್ಯ ಕಾರ್ಯದರ್ಶಿಗಳು ರಾಜ್ಯಕ್ಕೆ ಮರಳುತ್ತಾರೆ ಎಂದು ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಪೀಠವು ತಿಳಿಸಿತು.

ಕಳೆದ 10 ವರ್ಷಗಳಲ್ಲಿ ಸುಮಾರು 70,000 ಅಕ್ರಮ ವಿದೇಶಿ ವಲಸಿಗರು ರಾಜ್ಯದ ಜನರಲ್ಲಿ ಸೇರಿಕೊಂಡಿದ್ದಾರೆ ಎಂದು ಅಫಿದಾವತ್ತಿನಲ್ಲಿ ತಿಳಿಸಿರುವ ಅಸ್ಸಾಂ ಸರಕಾರವು,ಅಕ್ರಮ ವಿದೇಶಿಯರಿಗೆ ರೇಡಿಯೊ ಫ್ರೀಕ್ವೆನ್ಸಿ ಚಿಪ್‌ನ್ನು ಅಳವಡಿಸುವ ಪರಿಕಲ್ಪನೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಪ್ರಸ್ತಾವವೊಂದನ್ನ್ನು ತಾನು ಹೊಂದಿದ್ದೇನೆ ಎಂದೂ ತಿಳಿಸಿದೆ.

“ಕಳೆದ 10 ವರ್ಷಗಳಲ್ಲಿ ನೀವೇನು ಮಾಡುತ್ತಿದ್ದೀರಿ? ನಿಮ್ಮ ಅಂಕಿಅಂಶಗಳು ತಪ್ಪಾಗಿವೆ” ಎಂದು ಪೀಠವು ಹೇಳಿತು.

ಬಂಧನ ಕೇಂದ್ರಗಳಲ್ಲಿರುವ ವಿದೇಶಿಯರ ಸ್ಥಿತಿಯ ಕುರಿತು ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ. ಅವರು ಭಾರತೀಯರಲ್ಲವೆಂಬ ಏಕೈಕ ಕಾರಣದಿಂದ ಅವರನ್ನು ಅನಿರ್ದಿಷ್ಟಾವಧಿಗೆ ಬಂಧನದಲ್ಲಿಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅಸ್ಸಾಮ್‌ನಲ್ಲಿ ಸಾವಿರಾರು ಅಕ್ರಮ ವಲಸಿಗರನ್ನು ಅವರ ತವರು ದೇಶಗಳಿಗೆ ಗಡಿಪಾರುಗೊಳಿಸದೆ ವರ್ಷಗಳಿಂದಲೂ ಬಂಧನ ಕೇಂದ್ರಗಳಲ್ಲಿರಿಸಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಕಳವಳವನ್ನು ವ್ಯಕ್ತಪಡಿಸಿತ್ತು. ಬಂಧನ ಕೇಂದ್ರಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನೆತ್ತಿದ್ದ ಅದು,ಅಕ್ರಮ ವಲಸಿಗರನ್ನು ಅನಿರ್ದಿಷ್ಟಾವಧಿಗೆ ಬಂಧನದಲ್ಲಿಡುವಂತಿಲ್ಲ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News