×
Ad

‘ನ್ಯಾಯ್’ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆ: ರಾಹುಲ್

Update: 2019-04-01 21:53 IST

ವಾರಂಗಲ್, ಎ.1: ಬಡವರಿಗೆ ಆರ್ಥಿಕ ನೆರವು ನೀಡುವ ‘ನ್ಯಾಯ್’ ಯೋಜನೆಯಲ್ಲಿ ಮಹಿಳೆಯರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕುಟುಂಬದ ಮಹಿಳೆಯರ ಖಾತೆಗೆ ಹಣ ಜಮೆಯಾಗುವ ಮೂಲಕ ಕೋಟ್ಯಂತರ ಮಹಿಳೆಯರು ಸಶಕ್ತರಾಗುತ್ತಾರೆ ಮತ್ತು ಭಾರತವು ತನ್ನ ಕಾಲಿನ ಮೇಲೆ ನಿಲ್ಲಲು ಸಾಧ್ಯವಾಗುತ್ತದೆ ಎಂದು ರಾಹುಲ್ ಹೇಳಿದರು. ತೆಲಂಗಾಣದ ನಗರಕರ್ನೂಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವರ್ನಪರ್ತಿ ಎಂಬಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಬಡವರ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್ ಕನಿಷ್ಟ ಆದಾಯ ಯೋಜನೆ (ನ್ಯಾಯ್)ಯ ಮೂಲಕ ಬಡವರು ಘನತೆಯಿಂದ ಬದುಕಲು ನೆರವಾಗಲಿದೆ . 21ನೇ ಶತಮಾನದಲ್ಲಿ ಒಬ್ಬ ವ್ಯಕ್ತಿಯ ಮಾಸಿಕ ಆದಾಯ 12 ಸಾವಿರಕ್ಕಿಂತ ಕಡಿಮೆ ಇರಬಾರದು ಎಂದು ಕಾಂಗ್ರೆಸ್ ಭಾವಿಸುತ್ತದೆ. ಈ ಯೋಜನೆಯ ಫಲಾನುಭವಿಗಳು ಹೆಚ್ಚು ಹೆಚ್ಚು ಖರೀದಿ ಮಾಡುವುದರಿಂದ ಅರ್ಥವ್ಯವಸ್ಥೆಗೆ ವೇಗ ದೊರಕಲಿದೆ ಎಂದು ರಾಹುಲ್ ಹೇಳಿದರು.

ಯುಪಿಎ ಅಧಿಕಾರಕ್ಕೆ ಬಂದರೆ ಲೋಕಸಭೆ, ರಾಜ್ಯ ಸಭೆ ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ ಶೇ.33ರಷ್ಟು ಸ್ಥಾನ ಮಹಿಳೆಯರಿಗೆ ಮೀಸಲಾಗಿರುತ್ತದೆ. ಅಲ್ಲದೆ ಕೇಂದ್ರ ಸರಕಾರಿ ಉದ್ಯೋಗದ ಶೇ.33ರಷ್ಟು ಮಹಿಳೆಯರಿಗೆ ಮೀಸಲಾಗಿರುತ್ತದೆ ಎಂದರು.

 ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ತೆಲಂಗಾಣಕ್ಕೆ ಪ್ರಥಮ ಭೇಟಿ ನೀಡಿರುವ ರಾಹುಲ್ ಗಾಂಧಿ ಝಹೀರಾಬಾದ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಾ, “ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಹಾಗೂ ಬಿಜೆಪಿಯ ಮಧ್ಯೆ ರಹಸ್ಯ ಒಪ್ಪಂದ ಏರ್ಪಟ್ಟಿದೆ. ನೀವು ಟಿಆರ್‌ಎಸ್‌ಗೆ ಮತ ಹಾಕಿದರೆ ಅದು ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಹಾಕಿದಂತಾಗುತ್ತದೆ. ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಯಾವತ್ತೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಿರಲಿಲ್ಲ. ನೋಟು ರದ್ದತಿ, ಜಿಎಸ್‌ಟಿ ಮುಂತಾದ ವಿಷಯದಲ್ಲೂ ಕೇಂದ್ರ ಸರಕಾರವನ್ನು ಬೆಂಬಲಿಸಿದೆ” ಎಂದರು. “ಕಾಂಗ್ರೆಸ್ ಮತ್ತು ಆರೆಸ್ಸೆಸ್ ವಿರುದ್ಧ ಹೋರಾಡುವ ಶಕ್ತಿ ಕಾಂಗ್ರೆಸ್‌ಗೆ ಮಾತ್ರವಿದೆ. ರಾತ್ರಿ ಮೋದಿಯ ನಿದ್ದೆಗೆ ಭಂಗ ಉಂಟಾದರೆ ಅದಕ್ಕೆ ಕಾಂಗ್ರೆಸ್ ಕಾರಣ, ಇವತ್ತು ಮೋದಿಯ ಮುಖದಲ್ಲಿ ಅಂಜಿಕೆ ಎದ್ದು ಕಾಣಲು ಕಾಂಗ್ರೆಸ್ ಕಾರಣ. ಮೋದಿ ಹೋದಲ್ಲೆಲ್ಲಾ ದ್ವೇಷ ಮತ್ತು ಆಕ್ರೋಶವನ್ನು ಹರಡುತ್ತಿದ್ದಾರೆ ಮತ್ತು ಸುಳ್ಳು ಭರವಸೆ ನೀಡುತ್ತಿದ್ದಾರೆ. ಶ್ರೀಮಂತರ ಸುಮಾರು 3.5 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ ಪ್ರಧಾನಿ ಮೋದಿಗೆ ಶ್ರೀಮಂತರು ಮಾತ್ರ ಕಾಣುತ್ತಿದ್ದಾರೆ” ಎಂದು ರಾಹುಲ್ ಆರೋಪಿಸಿದರು.

ಚೀನಾವು ಪ್ರತೀ 24 ಗಂಟೆಗೆ 50 ಸಾವಿರ ಉದ್ಯೋಗ ಸೃಷ್ಟಿಸುತ್ತಿದೆ. ಆದರೆ ಪ್ರಧಾನಿ ಮೋದಿ ಇದೇ ಅವಧಿಯಲ್ಲಿ 27 ಸಾವಿರ ಉದ್ಯೋಗವನ್ನು ಕಿತ್ತುಕೊಳ್ಳುತ್ತಿದ್ದಾರೆ. ಪ್ರತೀ ವರ್ಷ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದರು. ಆದರೆ ಒಬ್ಬರಿಗೂ ಉದ್ಯೋಗ ದೊರಕಿಲ್ಲ. ಕಳೆದ 45 ವರ್ಷಕ್ಕೆ ಹೋಲಿಸಿದರೆ, ಮೋದಿ ಸರಕಾರದ ಐದು ವರ್ಷದ ಆಡಳಿತಾವಧಿಯಲ್ಲಿ ನಿರುದ್ಯೋಗದ ಸಮಸ್ಯೆ ಗರಿಷ್ಟವಾಗಿದೆ. ಯುಪಿಎ ಸರಕಾರ ಅಧಿಕಾರಕ್ಕೆ ಬಂದರೆ ಜಿಡಿಪಿಯ ಶೇ.6ರಷ್ಟು ಪ್ರಮಾಣವನ್ನು ಶಿಕ್ಷಣ, ಹೊಸ ಕಾಲೇಜು, ವಿವಿಯ ನಿರ್ಮಾಣ, ಸ್ಕಾಲರ್‌ಶಿಪ್ ನೀಡುವುದಕ್ಕೆ ವಿನಿಯೋಗಿಸಲಾಗುವುದು ಎಂದು ರಾಹುಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News