ಸೋಲಿನ ಭಯದಿಂದ ಸ್ಪರ್ಧೆಗೆ ಶರದ್ ಪವಾರ್ ಹಿಂದೇಟು: ಪ್ರಧಾನಿ ಮೋದಿ ಟೀಕೆ
ಮುಂಬೈ, ಎ.1: ಎನ್‌ಸಿಪಿ(ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಅಧ್ಯಕ್ಷ ಶರದ್ ಪವಾರ್‌ರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ , ಎನ್‌ಸಿಪಿ ಪಕ್ಷದಲ್ಲಿ ಅಂತಃಕಲಹ ಆರಂಭವಾಗಿದ್ದು, ಶರದ್ ಪವಾರ್ ಪಕ್ಷದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ವಾರ್ಧಾದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಮೋದಿ, ಪರಿಸ್ಥಿತಿ ತನಗೆ ವಿರುದ್ಧವಾಗಿದೆ ಎಂಬುದನ್ನು ಅರಿತುಕೊಂಡ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಪವಾರ್ ನಿರ್ಧರಿಸಿದರು . ಒಂದು ಸಮಯದಲ್ಲಿ ತಾನೂ ಪ್ರಧಾನಿಯಾಗಬಲ್ಲ ಎಂದು ಭಾವಿಸಿದ್ದ ಪವಾರ್ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಪರಿಸ್ಥಿತಿ ಅನುಕೂಲವಾಗಿಲ್ಲ ಎಂಬುದನ್ನು ಅರಿತೊಡನೆ, ನಾನು ರಾಜ್ಯಸಭಾ ಸದಸ್ಯನಾಗಿಯೇ ಇರುತ್ತೇನೆ ಎಂದುಬಿಟ್ಟರು. ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ ಎಂಬುದನ್ನು ಪವಾರ್ ತಿಳಿದುಕೊಂಡಿದ್ದಾರೆ. ಈ ಬಾರಿ ದೇಶದ ಜನತೆ, ಪ್ರಮುಖ ನಾಯಕರನ್ನೇ ಒಂದು ಕ್ಷೇತ್ರದಿಂದ ಇನ್ನೊಂದಕ್ಕೆ ಓಡುವಂತೆ ಮಾಡಿದ್ದಾರೆ ಎಂದು ಮೋದಿ ಹೇಳಿದರು.
ವಂಶಪಾರಂಪರ್ಯದ ಆಡಳಿತಕ್ಕೆ ಪವಾರ್ ಮುಂದಾಗಿದ್ದಾರೆ. ಆದರೆ ಪವಾರ್ ಸಾಹೇಬರ ಸೋದರಳಿಯ ಅಜಿತ್ ಪವಾರ್ ಪಕ್ಷದ ನಿಯಂತ್ರಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಶರದ್ ಪವಾರ್ ಹಿಡಿತ ಸಡಿಲವಾಗುತ್ತಿದೆ. ಈ ಕಾರಣದಿಂದಲೇ ಎನ್‌ಸಿಪಿ ಟಿಕೆಟ್ ಹಂಚಿಕೆಯಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಓರ್ವ ರೈತನಾಗಿದ್ದೂ ಶರದ್ ಪವಾರ್ ರೈತರ ಸಮಸ್ಯೆಯ ಬಗ್ಗೆ ನಿರ್ಲಕ್ಷದ ಧೋರಣೆ ತಳೆದಿದ್ದರು. ಈಗ ಶರದ್ ಪವಾರ್ ಅವರ ಸುಳ್ಳು ಭರವಸೆ ಬಹಿರಂಗವಾಗಿದೆ ಮತ್ತು ಅವರ ಸೋದರಳಿಯನೇ ಶರದ್‌ರನ್ನು ಹಿಟ್ ವಿಕೆಟ್ ಮಾಡಿದ್ದಾರೆ.
ಎನ್‌ಸಿಪಿಯ ಹಿರಿಯ ಮುಖಂಡರನ್ನು ನಿವೃತ್ತಿಯಾಗುವಂತೆ ಬಲವಂತಪಡಿಸಲಾಗುತ್ತಿದೆ ಎಂದು ಮೋದಿ ಹೇಳಿದರು. ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಎನ್‌ಸಿಪಿ, ವಾರ್ಧಾದಲ್ಲಿ ಖಾಲಿ ಮೈದಾನವನ್ನು ನೋಡಿ ಹತಾಶೆಯಿಂದ ಮೋದಿ ಈ ರೀತಿ ಹೇಳಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ಮುಖಂಡ ಎಲ್‌ಕೆ ಅಡ್ವಾಣಿಯನ್ನು ಮೂಲೆಗುಂಪು ಮಾಡಿದ ಮೋದಿಯಿಂದ ಎನ್‌ಸಿಪಿ ಅಧ್ಯಕ್ಷ ಪವಾರ್ ಕಲಿಯಬೇಕಿಲ್ಲ ಎಂದು ಪ್ರತಿಕ್ರಿಯಿಸಿದೆ.