ಸೊತ್ತುಗಳ ಸ್ವಾಧೀನ ನೀತಿ ಕಠಿಣವಾಗಿದ್ದು, ಸಾಲದಾತರಿಗೆ ಉಪಯುಕ್ತವಾಗಿಲ್ಲ: ವಿಜಯ್ ಮಲ್ಯ

Update: 2019-04-01 16:38 GMT

ಮುಂಬೈ,ಎ.1: ನೂತನವಾಗಿ ಜಾರಿಗೆ ಬಂದಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಕಾಯ್ದೆ (ಎಫ್‌ಇಒಎ) ಯಡಿಯಲ್ಲಿ ತನ್ನ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದು ಬಹಳ ನಿಷ್ಠುರ ಕ್ರಮವಾಗಿದ್ದು ಇದರಿಂದ ಸಾಲದಾತರಿಗೆ ಯಾವುದೇ ಉಪಯೋಗವಿಲ್ಲ ಎಂದು ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಎಫ್‌ಇಒಎ ಅಡಿ ತನ್ನನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿ ಹಣ ವಂಚನೆ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯ ಜನವರಿ 5ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಲ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕಾಯ್ದೆಯ ಪ್ರಕಾರ, ಒಮ್ಮೆ ವ್ಯಕ್ತಿಯನ್ನು ದೇಶಭ್ರಷ್ಟ ಎಂದು ಘೋಷಿಸಿದರೆ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಆತನ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು. ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಸ್ವಾಧೀನಪಡಿಸಿಕೊಳ್ಳುವುದರಿಂದ ಸಾಲದಾತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಮಲ್ಯಪರ ವಕೀಲ ಅಮಿತ್ ದೇಸಾಯಿ ಸೋಮವಾರ ನ್ಯಾಯಾಧೀಶರಾದ ಐ.ಎ ಮಹಂತಿ ಮತ್ತು ಎ.ಎಂ ಬದರ್ ಅವರ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಬ್ಯಾಂಕ್‌ಗಳು ಮತ್ತು ಸಾಲದಾತರಿಗೆ ಪ್ರಯೋಜನವಾಗುವಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ತನ್ನ ಸೊತ್ತುಗಳನ್ನು ವಾಪಸ್ ನೀಡಬೇಕೆಂದು ಮಲ್ಯ ಬಯಸುವುದಿಲ್ಲ. ಆದರೆ ಸರಕಾರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡರೆ ಬ್ಯಾಂಕ್‌ಗಳು ಮತ್ತು ಸಾಲದಾತರ ಸಮಸ್ಯೆ ಬಗೆಹರಿಯುವುದಿಲ್ಲ ಎಂದಷ್ಟೇ ನಾವು ಹೇಳಲು ಬಯಸುತ್ತೇವೆ ಎಂದು ದೇಸಾಯಿ ತಿಳಿಸಿದ್ದಾರೆ. ಮಲ್ಯ ಮೇಲ್ಮನವಿಗೆ ವಿರೋಧ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯ, ಭಾರತದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪರಾರಿಯಾಗಿರುವ ವ್ಯಕ್ತಿಯನ್ನು ಸ್ವದೇಶಕ್ಕೆ ಮರಳಿ ಬರುವಂತೆ ಮಾಡುವುದೇ ಈ ಕಾಯ್ದೆಯ ಮುಖ್ಯ ಉದ್ದೇಶ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News