ನಿಮ್ಮ ನೈಜ ಮುಖ ನೋಡಿಕೊಳ್ಳಿ: ಮೋದಿಗೆ ಕನ್ನಡಿ ಕಳುಹಿಸಿದ ಛತ್ತೀಸ್‌ಗಡ ಸಿಎಂ

Update: 2019-04-01 16:44 GMT

ರಾಯ್‌ಪುರ,ಎ.1: ಪ್ರಧಾನಿ ನರೇಂದ್ರ ಮೋದಿಗೆ ಕನ್ನಡಿ ಕಳುಹಿಸಿರುವ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಈ ಕನ್ನಡಿಯಲ್ಲಿ ಪ್ರಧಾನಿ ತನ್ನ ನಿಜಮುಖ ನೋಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ದೊಡ್ಡದಾದ ಕನ್ನಡಿಯನ್ನು ಮೋದಿಗೆ ಉಡುಗೊರೆಯಾಗಿ ಕಳುಹಿಸಿರುವ ಬಘೇಲ್ ನಂತರ, “ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ಮೋದಿಗೆ ಕನ್ನಡಿ ತೋರಿಸಲಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. “ಈ ಕನ್ನಡಿಯನ್ನು ಲೋಕಮಾನ್ಯ ರಸ್ತೆಯಲ್ಲಿರುವ ನಿಮ್ಮ ನಿವಾಸದಲ್ಲಿ ನೀವು ಅತ್ಯಧಿಕವಾಗಿ ನಡೆದಾಡುವ ಜಾಗದಲ್ಲಿಡಿ. ಇದರಿಂದ ಈ ಕನ್ನಡಿಯಲ್ಲಿ ಪದೇಪದೆ ನಿಮ್ಮನ್ನು ನೋಡುವ ಮೂಲಕ ನಿಮ್ಮ ನಿಜವಾದ ಮುಖವನ್ನು ಗುರುತಿಸಲು ನಿಮಗೆ ಸಾಧ್ಯವಾಗಬಹುದು” ಎಂದು ಬಘೇಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. “ನೀವು ಈ ಕನ್ನಡಿಯನ್ನು ಬಳಸದೆ ಕಸದ ತೊಟ್ಟಿಗೆ ಎಸೆಯಬಹುದು. ಆದರೆ ನೀವು ಕನ್ನಡಿಯನ್ನು ನೋಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ದೇಶದ 125 ಕೋಟಿ ಜನರು ನಿಮಗೆ ಕನ್ನಡಿ ತೋರಿಸಲಿದ್ದಾರೆ. ನೀವು ಸಿದ್ಧರಿದ್ದೀರಾ ಮೋದೀಜಿ?” ಎಂದು ಬಘೇಲ್ ಮೋದಿಗೆ ಕುಟುಕಿದ್ದಾರೆ.

ಮೋದಿಗೆ ಪತ್ರವನ್ನೂ ಬರೆದಿರುವ ಬಘೇಲ್ ಅದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪತ್ರದಲ್ಲಿ ಅವರು ಸರಕಾರದ ನೀತಿಗಳನ್ನು ಟೀಕಿಸಿದ್ದಾರೆ. ಮೋದಿ ತನಗೆ ಚಾಯ್‌ವಾಲಾ, ಚೌಕಿದಾರ್, ಸಾಹೆಬ್, ಫಕೀರ್ ಇನ್ನೂ ಹಲವಾರು ಹೆಸರುಗಳನ್ನು ನೀಡಿದ್ದಾರೆ. ಇದರಿಂದ ಜನರು ಅವರನ್ನು ಯಾವ ಹೆಸರಿನಿಂದ ಕರೆಯಬೇಕು ಎಂದು ಗೊಂದಲಕ್ಕೀಡಾಗಿದ್ದಾರೆ ಎಂದು ಬಘೇಲ್ ವ್ಯಂಗ್ಯವಾಡಿದ್ದಾರೆ. ಮೋದಿಯ ಸೂಟು, ವಿದೇಶ ಪ್ರಯಾಣ, ಜಿಎಸ್‌ಟಿ, ಪಾಕಿಸ್ತಾನ ಮತ್ತು ಚೀನಾಕ್ಕೆ ಸಂಬಂಧಿಸಿದ ನೀತಿ ಮತ್ತು ರಫೇಲ್ ಯುದ್ಧವಿಮಾನ ಒಪ್ಪಂದಕ್ಕೆ ಸಂಬಂಧಿಸಿ ಪ್ರಧಾನಿಯನ್ನು ತೀವ್ರವಾಗಿ ಟೀಕಿಸಿರುವ ಬಘೇಲ್, ಮೋದಿಯ ಭರವಸೆಗಳು ಕೇವಲ ಜುಮ್ಲಾಗಳಷ್ಟೇ ವಿನಹ ಅವುಗಳಲ್ಲಿ ಒಂದನ್ನೂ ಈಡೇರಿಸಿಲ್ಲ ಎಂದು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News