×
Ad

ವಯನಾಡ್‌ನಲ್ಲಿ ರಾಹುಲ್ ವಿರುದ್ಧ ಎನ್‌ಡಿಎಯಿಂದ ಕಣಕ್ಕಿಳಿದವರು ಯಾರು ಗೊತ್ತಾ?

Update: 2019-04-01 22:23 IST

ತಿರುವನಂತಪುರಂ,ಎ.1: ಕೇರಳದ ವಯನಾಡ್‌ನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ)ದ ಅಭ್ಯರ್ಥಿಯಾಗಿ ಭಾರತ ಧರ್ಮ ಜನ ಸೇನಾದ ತುಷಾರ್ ವೆಲ್ಲಪಳ್ಳಿ ಸ್ಪರ್ಧಿಸುತ್ತಿರುವುದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೋಮವಾರ ಘೋಷಿಸಿದ್ದಾರೆ. ವಯನಾಡ್‌ನಲ್ಲಿ ವೆಲ್ಲಪಳ್ಳಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧೆಗಿಳಿಯುತ್ತಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಹೇಳಿಕೊಂಡಿರುವ ಅಮಿತ್ ಶಾ, ತುಷಾರ್ ವೆಲ್ಲಪಳ್ಳಿ ಓರ್ವ ಸ್ಪಂದನಶೀಲ ಮತ್ತು ಕ್ರಿಯಾಶೀಲ ಯುವಕನಾಗಿದ್ದು ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತಾರೆ. ಅವರೊಂದಿಗೆ ಎನ್‌ಡಿಎ ಕೇರಳದಲ್ಲಿ ರಾಜಕೀಯ ಪರ್ಯಾಯವಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ತುಷಾರ್ ಅವರು ವೆಲ್ಲಪಳ್ಳಿ ನಟೇಶನ್ ಅವರ ಪುತ್ರರಾಗಿದ್ದಾರೆ. ನಟೇಶನ್ ಶ್ರೀ ನಾರಾಯಣ ಧರ್ಮಪಾಲನಾ ಯೋಗಮ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಈ ಸಂಸ್ಥೆ ಕೇರಳದಲ್ಲಿ ಎಳವ ಸಮುದಾಯದ ಉದ್ಧಾರಕ್ಕಾಗಿ ಶ್ರಮಿಸುತ್ತಿದೆ. ತುಷಾರ್ ವೆಲ್ಲಪಳ್ಳಿ ಭಾರತ ಧರ್ಮ ಜನ ಸೇನಾದ ಅಧ್ಯಕ್ಷರಾಗಿದ್ದಾರೆ.

ಕೇರಳದ ತ್ರಿಶೂರು, ಮಾವೆಲಿಕ್ಕರ, ಇಡುಕ್ಕಿ ಮತ್ತು ಅಲತೂರು ಸೇರಿದಂತೆ ವಯನಾಡ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಭಾರತ ಧರ್ಮ ಜನ ಸೇನಾಗೆ ನೀಡಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಠಿಯಿಂದ ಸ್ಪರ್ಧಿಸುವ ಜೊತೆಗೆ ಕೇರಳದ ವಯನಾಡ್‌ನಿಂದಲೂ ಕಣಕ್ಕಿಳಿಯುತ್ತಿದ್ದಾರೆ ಎಂದು ಕಾಂಗ್ರೆಸ್ ರವಿವಾರ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News