ಲಾಲೂ ಪ್ರಸಾದ್ ಪುತ್ರನಿಂದ ‘ಲಾಲೀ ರಾಬ್ರಿ ಮೋರ್ಚಾ’ ಪಕ್ಷ
ಪಟ್ನಾ,ಎ.1: ಲೋಕಸಭಾ ಚುನಾವಣೆಗೂ ಮುನ್ನ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಕುಟುಂಬದಲ್ಲಿ ಬಿರುಕು ಮೂಡಿದ್ದು, ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಸೋಮವಾರ ತಾನು ಲಾಲೂ ರಾಬ್ರಿ ಮೋರ್ಚಾ ಪಕ್ಷಕ್ಕೆ ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ.
ನೂತನ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ 20 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಜನತಾದಳದ ಯುವ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ಕಳೆದ ವಾರ ರಾಜೀನಾಮೆ ಸಲ್ಲಿಸಿದ್ದ ತೇಜ್ ಪ್ರತಾಪ್, ತನ್ನ ಸಹೋದರ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಜೊತೆಗಿನ ಸಂಬಂಧ ಹಳಸಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದರು. “ನನ್ನ ಸಹೋದರ ತೇಜಸ್ವಿಯನ್ನು ಹೊಗಳುಭಟರೇ ಸುತ್ತುವರಿದಿದ್ದು, ಅವರು ಆತ ನನ್ನ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದಾರೆ” ಎಂದು ತೇಜ್ ಪ್ರತಾಪ್ ಆರೋಪಿಸಿದ್ದಾರೆ. ವರದಿಗಳ ಪ್ರಕಾರ, ತೇಜ್ ಪ್ರತಾಪ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನ್ನ ಆಪ್ತರಿಗೆ ಎರಡು ಸ್ಥಾನಗಳನ್ನು ನೀಡಲು ಬೇಡಿಕೆಯಿಟ್ಟಿದ್ದರು.
ಆದರೆ ಈ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು. ಅದಕ್ಕೆ ಬದಲಾಗಿ ಆರ್‌ಜೆಡಿ ತೇಜ್ ಪ್ರತಾಪ್‌ನ ಪರಿತ್ಯಕ್ತ ಮಾವ ಚಂದ್ರಿಕ ರೈ ಗೆ ಸರನ್ ಕ್ಷೇತ್ರದಿಂದ ಟಿಕೆಟ್ ನೀಡಿತ್ತು. ಇದಕ್ಕೆ ತೇಜ್ ಪ್ರತಾಪ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಲಾಲೂ ಪ್ರಸಾದ್ ಮತ್ತು ತೇಜಸ್ವಿ ಯಾದವ್, ತೇಜ್ ಪ್ರತಾಪ್‌ರನ್ನು ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ಮುಖಭಂಗಕ್ಕೀಡಾದ ತೇಜ್ ಪ್ರತಾಪ್ ಸದ್ಯ ತನ್ನದೇ ನೂತನ ಪಕ್ಷವನ್ನು ಸ್ಥಾಪಿಸಲು ಮುಂದಾಗಿದ್ದು ಅದಕ್ಕೆ ತನ್ನ ತಂದೆತಾಯಿ ಹೆಸರು ನೀಡಿದ್ದಾರೆ.