ವಿಲೀನದ ಬಳಿಕ ದೇಶದ 2ನೆ ಅತಿ ದೊಡ್ಡ ಸರಕಾರಿ ಬ್ಯಾಂಕ್ ಆದ ‘ಬ್ಯಾಂಕ್ ಆಫ್ ಬರೋಡ’

Update: 2019-04-01 17:55 GMT

ಹೊಸದಿಲ್ಲಿ,ಎ.1: ಸೋಮವಾರ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್‌ಗಳನ್ನು ತನ್ನಲ್ಲಿ ಅಧಿಕೃತವಾಗಿ ವಿಲೀನಗೊಳಿಸಿಕೊಳ್ಳುವ ಮೂಲಕ ಬ್ಯಾಂಕ್ ಆಫ್ ಬರೋಡಾ(ಬಿಒಬಿ) ದೇಶದ ಎರಡನೇ ಅತಿ ದೊಡ್ಡ ಸರಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ನಂ.1 ಸ್ಥಾನದಲ್ಲಿದೆ.

 ವಿಲೀನದ ಬಳಿಕ ಬಿಒಬಿಯ ಠೇವಣಿಗಳು 8.75 ಲ.ಕೋ.ರೂ. ಮತ್ತು ಸಾಲಗಳು 6.25 ಲ.ಕೋ.ರೂ.ಗಳಿಗೆ ಏರಿಕೆಯಾಗಿವೆ. ಈಗ ಬಿಒಬಿ 9,500 ಶಾಖೆಗಳು,13,400 ಎಟಿಎಂ ಮತ್ತು 12 ಕೋಟಿ ಗ್ರಾಹಕರಿಗೆ ಸೇವೆ ಸಲ್ಲಿಸಲು 85,000 ಉದ್ಯೋಗಿಗಳ ಪಡೆಯನ್ನು ಹೊಂದಿದೆ.

 ತನ್ಮಧ್ಯೆ ವಿಲೀನ ಯೋಜನೆಯಂತೆ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಶೇರುದಾರರಿಗೆ ಶೇರು ಹಂಚಿಕೆಯನ್ನು ಬಿಒಬಿ ಪೂರ್ಣಗೊಳಿಸಿದೆ. ವಿಜಯ ಬ್ಯಾಂಕ್ ಶೇರುದಾರರು ತಾವು ಹೊಂದಿದ್ದ ಪ್ರತಿ 1,000 ಶೇರುಗಳಿಗೆ ಬಿಒಬಿಯ 402 ಮತ್ತು ದೇನಾ ಬ್ಯಾಂಕ್ ಶೇರುದಾರರು ಪ್ರತಿ 1,000 ಶೇರುಗಳಿಗೆ 110 ಬಿಒಬಿ ಶೇರುಗಳನ್ನು ಪಡೆದಿದ್ದಾರೆ.

ವಿಲೀನದ ಬಳಿಕ ಬಿಒಬಿ ಗುಜರಾತ್‌ನಲ್ಲಿ ಶೇ.22 ಹಾಗೂ ಮಹಾರಾಷ್ಟ್ರ,ಕರ್ನಾಟಕ,ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಶೇ.8ರಿಂದ ಶೇ.10ರಷ್ಟು ಮಾರುಕಟ್ಟ್ಟೆ ಪಾಲು ಹೊಂದಿದೆ ಎಂದು ಬ್ಯಾಂಕು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News