ನೆನಪಿನಂಗಳದಿ ಬಿ.ಎ.ಸನದಿ

Update: 2019-04-01 18:43 GMT

ರವಿವಾರದ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ನನ್ನವರು ಮೊಬೈಲ್ ಮೇಲೆ ಬೆರಳಾಡಿಸುತ್ತಾ ಕುಳಿತಿದ್ದರು. ನಾನು ಕೂಡಾ ಸಾವಧಾನದಿಂದಲೇ ಮನೆಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ಇದ್ದಕ್ಕಿದ್ದಂತೆ ಇವರು ನನ್ನನ್ನು ಕರೆದು ವಾರ್ತಾಭಾರತಿ ವೆಬ್ ಆವೃತ್ತಿಯಲ್ಲಿ ಪ್ರಕಟವಾದ ಮಾನವ್ಯ ಕವಿ ಬಿ.ಎ.ಸನದಿಯವರ ಮರಣ ವಾರ್ತೆ ತೋರಿಸಿದರು. ನನಗೇ ತಿಳಿಯದಂತೆ ಕಣ್ಣಂಚು ತೇವಗೊಂಡಿತು.

ಮನಸು ಸುಮಾರು ಹನ್ನೆರಡು ವರ್ಷಗಳ ಹಿಂದಕ್ಕೋಡಿತು. ಸರಕಾರಿ ಪದವಿಪೂರ್ವ ಕಾಲೇಜು ಕನ್ಯಾನದಲ್ಲಿ ನಡೆದ ಸಾಹಿತ್ಯ ಸಮ್ಮೇಳನವೊಂದಕ್ಕೆ ಬಿ.ಎ. ಸನದಿ ಬಂದಿದ್ದರು. ನಾನಾಗ ಅಲ್ಲಿನ ವಿದ್ಯಾರ್ಥಿನಿಯಾಗಿದ್ದೆ. ನಮ್ಮ ಫ್ರೌಡಶಾಲೆಯ ಕನ್ನಡ ಪಠ್ಯ ಪುಸ್ತಕದಲ್ಲಿ ಅವರದೊಂದು ಕವನವಿತ್ತು.

ಕಾಶ್ಮೀರದ ಕಣಿವೆಯಲ್ಲಿ ಹಗೆಯ ಕೆಂಗಿಡಿ/ಸಿಡಿದರೆ ಮಗೆ ಭಯವೆ ? ನಮ್ಮ ಬಲವು ನೂರ್ಮಡಿ...

ಈ ಕವನಕ್ಕೆ ರಾಗ ಸಂಯೋಜಿಸಿ ಪ್ರತಿಭಾ ಕಾರಂಜಿಯಲ್ಲಿ ಹಾಡಿದ ನನಗೆ ಪ್ರಥಮ ಬಹುಮಾನ ದೊರೆತಿತ್ತು. ಇದೀಗ ಅವರನ್ನು ಮುಖತಃ ಭೇಟಿಯಾಗುವ ಅದೃಷ್ಟ ಒಲಿದಿದ್ದಕ್ಕೆ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. 

ಅಂದಿನ ಕವಿಗೋಷ್ಠಿಯಲ್ಲಿ ಅವರು *ಇಕ...ಇಕ...ಇದು ಅಮೇರಿಕಾ ಎಂಬ ಕವನವನ್ನು ವಾಚಿಸಿದ ನೆನಪು.

ವಿರಾಮದ ವೇಳೆಯಲ್ಲಿ ನನ್ನ ನೆಚ್ಚಿನ ಗುರುವರ್ಯರೂ, ಚುಟುಕು ಕವಿಗಳೂ ಆದ ದಿವಂಗತ ರವಿಶಂಕರ್ ಶೆಟ್ಟಿ ಒಡ್ಡಂಬೆಟ್ಟು ನನ್ನನ್ನು ಕರೆದು ಕೊಂಡು ಹೋಗಿ ಬಿ.ಎ.ಸನದಿಯವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಅಷ್ಟು ದೊಡ್ಡ ಕವಿಯಾದರೂ ಯಾವ ಹಮ್ಮು‌‌ ಬಿಮ್ಮು‌ ಇಲ್ಲದೇ ಬಹಳ ಪ್ರೀತಿಯಿಂದ ಮಾತನಾಡಿಸಿದರು. ನಾನು ಬರೆದ ಕವನಗಳ ಡೈರಿಯನ್ನು ಅವರಿಗೆ ತೋರಿಸಿದೆ. ಅಷ್ಟೆಲ್ಲಾ ಬ್ಯುಸಿಯಿದ್ದರೂ ಸಾವಧಾನವಾಗಿ ನನ್ನ ಕವನಗಳ ಮೇಲೆ ಕಣ್ಣೋಡಿಸಿ ಕೆಲವು ಅನಿಸಿಕೆಗಳು ಮತ್ತು ಸಲಹೆಗಳನ್ನು ನೀಡಿದರು.

ಹಾರಲು ಹೊರಟೀನವ್ವ ನಾನು/
ಹಾರಲು ಹೊರಟೀನಿ/
ಸುಂದರ ಚಂದಿರನೊಡನೆ ಆಡಲು/
ಬಾನಿಗೆ ಹೊರಟೀನಿ.....

ನನ್ನ ಈ ಕವನದಲ್ಲಿದ್ದ ತಪ್ಪುಗಳನ್ನೆಲ್ಲಾ ತೋರಿಸಿದ ಮೇಲೆ ಅವರು ಚೆನ್ನಾಗಿದೆ, ಹೆಚ್ಚೆಚ್ಚು ಕವನಗಳನ್ನು ಓದುತ್ತಿರು. ಓದುತ್ತಾ ಬೆಳೆಯುತ್ತೀ ಮಗಳೇ... ಬರೆಯುವುದನ್ನು ಮುಂದುವರಿಸು, ಭವಿಷ್ಯವಿದೆ ಎಂದು ಹರಸಿದ್ದರು. ಒಂದರ್ಥದಲ್ಲಿ‌ ಅವರು ನನಗೆ ಮಾನಸ ಗುರುಗಳು.

ಇತ್ತೀಚೆಗೆ ನಡೆದ ಪುಲ್ವಾಮ ದಾಳಿಯ ಸಂದರ್ಭ ಸನದಿಯವರ ಕಾಶ್ಮೀರದ ಕಣಿವೆಯಲ್ಲಿ ಹಗೆಯ ಕೆಂಗಿಡಿ.... ಎಂಬ ನನ್ನ ಇಷ್ಟದ ಹಾಡನ್ನು ಗುನುಗುತ್ತಿದ್ದೆ. ಇದನ್ನು ಕೇಳಿಸಿಕೊಂಡ ನನ್ನವರು ಇದು ಯಾರ ಹಾಡೆಂದು ಕೇಳಿದರು. ಬಿ.ಎ.ಸನದಿಯವರದ್ದು ಎಂದೆ. ಬಿ.ಎ.ಸನದಿಯವರ ಪೂರ್ಣ ಹೆಸರೇನೆಂದು ಮರು ಪ್ರಶ್ನೆ ಹಾಕಿದರು. ಕವಿ ಪರಿಚಯದಲ್ಲಾಗಲೀ... ನಾನು ಓದಿದ ಅವರ ಕೆಲವು ಕವನ ಸಂಕಲನಗಳಲ್ಲಾಗಲೀ ಅವರ ಪೂರ್ಣ ಹೆಸರಿರದಿದ್ದ ಕಾರಣ ನನಗೆ ತಿಳಿದಿರಲಿಲ್ಲ. ಆದುದರಿಂದ ಗೊತ್ತಿಲ್ಲ ಎಂದೆ.

ಆಗ ಇವರು "ಬಾಬಾ ಸಾಹೇಬ್ ಅಹ್ಮದ್ ಸಾಹೇಬ್ ಸನದಿ" ಎಂದಿದ್ದರು. ನಾನು ಅವರು ಮುಸಲ್ಮಾನರೇ ಎಂದು ಉದ್ಘಾರವೆತ್ತಿದೆ. ಬಿ.ಎಂ.ಇದ್ದಿನಬ್ಬ, ಬಿ.ಎ.ಅಕ್ಬರ್ ಅಲಿ, ಕೆ.ಎಸ್.ನಿಸಾರ್ ಅಹ್ಮದ್ ಈ ಮೂವರಷ್ಟೇ ಹಳೇ ಕಾಲದ ಮುಸ್ಲಿಂ ಕನ್ನಡ ಕವಿಗಳೆಂದುಕೊಂಡಿದ್ದೆ. ನನಗೆ ಬಿ.ಎ.ಸನದಿಯವರು ಮುಸ್ಲಿಂ ಎಂದಾಗ ತುಂಬಾನೇ ಖುಷಿಯಾಗಿತ್ತು. ಅದು ಸಂಕುಚಿತತೆಯಂತೂ ಖಂಡಿತ ಅಲ್ಲ. ಕನ್ನಡ ಕಾವ್ಯ ಲೋಕಕ್ಕೆ ಅನನ್ಯ ಕೊಡುಗೆ ಕೊಟ್ಟವರಲ್ಲಿ ನಾನು ಪ್ರತಿನಿಧಿಸುವ ಸಮುದಾಯದವರೂ ಇದ್ದಾರೆಂಬ ಸಂತೋಷದ ಕಾರಣಕ್ಕೆ.

ಸನದಿಯವರನ್ನು ನಾನು ಕಂಡು ಮಾತನಾಡಿಸಿದ್ದು ಒಮ್ಮೆಯಾದರೂ ಅವರ ಅತ್ಯಂತ ಸರಳ ನಡವಳಿಕೆ, ಪ್ರೀತಿ ತುಂಬಿದ ಹೃದಯ ಮಾತುಗಳು ನನ್ನ ಹೃದಯದಿಂದ ಎಂದೂ ಮಾಸದು. ಮರಣ ಯಾರನ್ನೂ ಬಿಡುವುದಿಲ್ಲ. ನಮ್ಮಿಂದ ಅಗಲಿರುವುದು ಸನದಿ ಎಂಬ ಬೌತಿಕ ದೇಹ ಮಾತ್ರ.  ಅವರ ಅತ್ಯದ್ಭುತ ಕಾವ್ಯಗಳು ಸದಾ ನಮ್ಮೊಂದಿಗಿರುತ್ತದೆ.‌ ಅವುಗಳಿಗೆಂದೂ ಸಾವಿಲ್ಲ. ಸನದಿಯವರಿಗೆ ಹೀಗೊಂದು ವಿದಾಯದ ಸಲಾಂ....

Writer - ಮಿಸ್ರಿಯಾ.ಐ. ಪಜೀರ್

contributor

Editor - ಮಿಸ್ರಿಯಾ.ಐ. ಪಜೀರ್

contributor

Similar News