ಸಶಸ್ತ್ರ ಪಡೆಗಳು ಓರ್ವ ವ್ಯಕ್ತಿಗೆ ಸೇರಿದ್ದಲ್ಲ:ಮಾಜಿ ನೌಕಾ ಪಡೆ ಮುಖ್ಯಸ್ಥ ರಾಮದಾಸ್ ಆಕ್ರೋಶ

Update: 2019-04-02 07:27 GMT

ಹೊಸದಿಲ್ಲಿ, ಎ.2: "ಭಾರತೀಯ ಸೇನೆಯನ್ನು ‘ಮೋದಿಜಿಯ ಸೇನೆ’’ ಎಂದು ಚುನಾವಣಾ ರ್ಯಾಲಿಯಲ್ಲಿ ಹೇಳಿಕೆ ನೀಡಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ದೂರು ಸಲ್ಲಿಸಲು ಚುನಾವಣಾ ಆಯುಕ್ತರನ್ನು ಭೇಟಿಯಾಗುವೆ'' ಎಂದು ನೌಕಾ ಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್.ರಾಮದಾಸ್ ಸೋಮವಾರ ತಿಳಿಸಿದ್ದಾರೆ.

  ‘‘ಸಶಸ್ತ್ರ ಪಡೆಗಳು ಯಾವಾಗಲೂ ಓರ್ವ ವ್ಯಕ್ತಿಗೆ ಸೇರಿದ್ದಲ್ಲ. ಸೇನಾ ಪಡೆ ದೇಶಕ್ಕಾಗಿ ಸೇವೆ ಸಲ್ಲಿಸುತ್ತದೆೆ. ಮುಖ್ಯಮಂತ್ರಿಯೊಬ್ಬರ ಇಂತಹ ಹೇಳಿಕೆಯಿಂದಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಹಿರಿಯ ಅಧಿಕಾರಿಗಳಿಗೆ ತುಂಬಾ ಬೇಸರವಾಗಿದೆ. ಚುನಾವಣೆ ಮುಗಿಯುವ ತನಕ ಮುಖ್ಯ ಚುನಾವಣಾ ಆಯುಕ್ತರೇ ಬಾಸ್. ಹೀಗಾಗಿ ನಾನು ಈ ವಿಚಾರಕ್ಕೆ ಸಂಬಂಧಿಸಿ ಆಯುಕ್ತರನ್ನು ಶೀಘ್ರವೇ ಭೇಟಿಯಾಗುವೆ’’ ಎಂದು ರಾಮದಾಸ್ ಹೇಳಿದ್ದಾರೆ.

ಸೋಮವಾರ ಗಾಝಿಯಾಬಾದ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಿದ ಆದಿತ್ಯನಾಥ್, ಭಾರತೀಯ ಸೇನೆಯನ್ನು ‘ಮೋದಿಜಿಯ ಸೇನೆ’ ಎಂದು ಕರೆದಿದ್ದರು. ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

‘‘ರಾಜಕಾರಣಿಗಳ ಇಂತಹ ಹೇಳಿಕೆ ನನಗೆ ಅಚ್ಚರಿ ತಂದಿಲ್ಲ. ಕಳೆದ ಐದು ವರ್ಷಗಳಿಂದ ಸಶಸ್ತ್ರ ಪಡೆಗಳಲ್ಲಿ ರಾಷ್ಟ್ರೀಯತೆಯನ್ನು ಬೆರೆಸುವ ಪ್ರಯತ್ನ ನಡೆಯುತ್ತಲೇ ಇದೆ. ಇಂತಹ ಹೇಳಿಕೆಗಳು ಸೇನೆಯನ್ನು ರಾಜಕೀಕರಣಗೊಳಿಸಿದಂತಾಗುತ್ತದೆ. ಸೇನೆಯು ರಾಜಕೀಯದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕಾಗಿದೆ’’ ಎಂದು ಲೆಫ್ಟಿನೆಂಟ್ ಜನರಲ್(ನಿವೃತ್ತ)ಎಚ್.ಎಸ್.ಪನಾಗ್ ಅಭಿಪ್ರಾಯಪಟ್ಟಿದ್ದಾರೆ.

ಆದಿತ್ಯನಾಥ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಈ ವಿಚಾರಕ್ಕೆ ಸಂಬಂಧಿಸಿ ವರದಿ ಸಲ್ಲಿಸುವಂತೆ ಗಾಝಿಯಾಬಾದ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News