ಪುಲ್ವಾಮ ದಾಳಿಗೆ ಮುನ್ನ ಉಗ್ರ ನಿಗ್ರಹ ತರಬೇತಿಯ ಲೋಪಗಳ ಬಗ್ಗೆ ಸರಣಿ ಪತ್ರ ಬರೆದಿದ್ದ ಸಿಆರ್ ಪಿಎಫ್ ಅಧಿಕಾರಿ

Update: 2019-04-02 11:51 GMT

ಅದು ಬಂಡಾಯ ಮತ್ತು ಉಗ್ರಗಾಮಿಗಳ ವಿರುದ್ಧ ಹೋರಾಡುವ ಪಡೆಗಳ ಅತಿದೊಡ್ಡ ಹಾಗೂ ಪ್ರಮುಖ ತರಬೇತಿ ಕೇಂದ್ರ. ಆದರೆ ಇಲ್ಲಿ ಖಾಯಂ ಕಟ್ಟಡಗಳಿಲ್ಲ, ಫೈರಿಂಗ್ ರೇಂಜ್ ಇಲ್ಲ, ಆವರಣ ಗೋಡೆಯೂ ಇಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ 150 ತರಬೇತಿ ಮತ್ತು ಆಡಳಿತಾತ್ಮಕ ಸಿಬ್ಬಂದಿಯನ್ನು ಕೇವಲ ಹುದ್ದೆ ಭರ್ತಿ ಮಾಡುವ ಸಲುವಾಗಿ ಅಲ್ಲಿಗೆ ನಿಯೋಜಿಸಲಾಗಿತ್ತು. ಆದರೆ ಇಂದಿನವರೆಗೂ ಅದು ಸಿಐಎಟಿ (ಕೌಂಟರ್ ಇನ್ಸರ್ಜೆನ್ಸಿ ಅಂಡ್ ಆಂಟಿ ಟೆರರಿಸಂ) ಸಂಬಂಧಿತ ಕೋರ್ಸ್‍ಗಳನ್ನು ಹೊಂದಿಲ್ಲ!

2018ರ ನವೆಂಬರ್ ನಿಂದ ಸಿಆರ್‍ಪಿಎಫ್ ಹಿರಿಯ ಅಧಿಕಾರಿಯೊಬ್ಬರು, ಭಯೋತ್ಪಾದಕ ನಿಗ್ರಹ ತರಬೇತಿ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಹೊಸದಿಲ್ಲಿಯಲ್ಲಿರುವ ಸಿಆರ್ ಪಿಎಫ್ ಕೇಂದ್ರ ಕಚೇರಿಗೆ ಬರೆದ ಸರಣಿ ಪತ್ರದ ಸಾರಾಂಶ ಇದು.

ಸಿಆರ್‍ ಪಿಎಫ್ ಐಜಿ ರಜನೀಶ್ ರೈ 2018ರ ನವೆಂಬರ್ 22ರಂದು ಅಂದರೆ 40 ಮಂದಿ ಸಿಆರ್‍ ಪಿಎಫ್ ಯೋಧರನ್ನು ಬಲಿ ಪಡೆದ ಜೈಶ್ ದಾಳಿ ನಡೆಯುವ ಎರಡು ತಿಂಗಳು ಮೊದಲು ಈ ಪತ್ರ ಸರಣಿಯ ಕೊನೆಯ ಪತ್ರ ಬರೆದಿದ್ದರು.

ಆಂಧ್ರಪ್ರದೇಶದ ಚಿತ್ತೂರಿನಲ್ಲಿ 175 ಎಕರೆ ವಿಶಾಲ ಪ್ರದೇಶದಲ್ಲಿರುವ ಸಿಐಎಟಿ ಸ್ಕೂಲ್‍ನ ಉಸ್ತುವಾರಿ ಹೊಣೆ ರೈ ಅವರದ್ದು. ಕೇಂದ್ರ ಗೃಹ ಸಚಿವಾಲಯ ಹೊಸದಾಗಿ ಮಂಜೂರು ಮಾಡಿದ ಇಂಥ ಮೂರು ಶಾಲೆಗಳ ಪೈಕಿ ಇದೂ ಒಂದು. ಇದು ವಿವಿಧ ಪಡೆಗಳಿಗಾಗಿ ನೀಡಿದ 21 ಇಂತಹ ಕೇಂದ್ರಗಳಲ್ಲಿ ಸೇರಿದೆ.

1992ನೇ ಬ್ಯಾಚ್ ಗುಜರಾತ್ ಕೇಡರ್ ‍ನ ಐಪಿಎಸ್ ಅಧಿಕಾರಿಯಾಗಿರುವ ರೈ, 2017ರ ಜೂನ್‍ವರೆಗೂ ಸಿಆರ್‍ ಪಿಎಫ್ ಈಶಾನ್ಯ ವಿಭಾಗದ ಐಜಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಚಿತ್ತೂರಿನ ಸಿಐಎಟಿ ಶಾಲೆಯ ಜವಾಬ್ದಾರಿ ನಿರ್ವಹಿಸುವಂತೆ ಸೂಚಿಸಲಾಯಿತು. ಅಸ್ಸಾಂನ ಚಿರಾಂಗ್‍ ನಲ್ಲಿ ಮಾರ್ಚ್ 30ರಂದು ಸೇನೆ, ಸಿಆರ್‍ ಪಿಎಫ್, ಎಸ್‍ ಎಸ್‍ಬಿ ಮತ್ತು ಪೊಲೀಸರನ್ನೊಳಗೊಂಡ ತಂಡ ನಡೆಸಿತು ಎನ್ನಲಾದ ನಕಲಿ ಎನ್‍ಕೌಂಟರ್ ಬಗ್ಗೆ ತನಿಖೆಗೆ ಆಗ್ರಹಿಸಿ ಮೂರು ತಿಂಗಳಲ್ಲಿ ಈ ವರ್ಗಾವಣೆ ಆದೇಶ ಅವರ ಕೈಸೇರಿತ್ತು.

ಕಳೆದ ವರ್ಷದ ಆಗಸ್ಟ್‍ ನಲ್ಲಿ ಸ್ವಯಂ ನಿವೃತ್ತಿ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಿ ಸೇವೆ ತ್ಯಜಿಸುವ ವೇಳೆ ಅಧಿಕಾರವನ್ನು ಅನಧಿಕೃತವಾಗಿ ವರ್ಗಾಯಿಸಿದ ಆರೋಪದಲ್ಲಿ ಕಳೆದ ಡಿಸೆಂಬರ್‍ ನಲ್ಲಿ ಗೃಹ ಸಚಿವಾಲಯ ಇವರನ್ನು ಅಮಾನತು ಮಾಡಿತ್ತು. ಇವರ ಸ್ವಯಂನಿವೃತ್ತಿ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಕೇಂದ್ರದ ಈ ನಿರ್ಧಾರಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಜನವರಿಯಲ್ಲಿ ತಡೆಯಾಜ್ಞೆ ನೀಡಿದೆ. ಬಳಿಕ ರೈ ಗುಜರಾತ್ ಹೈಕೋರ್ಟ್‍ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸಿಆರ್‍ ಪಿಎಫ್  ಶಾಲೆಗಳು ಕಾಶ್ಮೀರ, ಈಶಾನ್ಯ ಮತ್ತು ಎಲ್‍ಡಬ್ಲ್ಯುಇ ಪ್ರದೇಶಕ್ಕೆ ತೆರಳುವ ಸಿಬ್ಬಂದಿಗೆ ಕೇವಲ ಒಳಾಂಗಣಕ್ಕೆ ನಿರ್ದಿಷ್ಟವಾದ, ಅಲ್ಪಾವಧಿ ಹಾಗೂ ನಿಯೋಜನಾಪೂರ್ವ ತರಬೇತಿಯನ್ನಷ್ಟೇ ನೀಡುತ್ತಿವೆ ಎಂದು ರೈ ಪತ್ರದಲ್ಲಿ ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಲು ರೈ ಲಭ್ಯರಿಲ್ಲ. ಆದರೆ ಈ ಎಲ್ಲ ಲೋಪಗಳ ನಡುವೆಯೂ ಚಿತ್ತೂರು ಶಾಲೆಯಲ್ಲಿ ರೈ "ಯಾವುದೇ ಬಗೆಯ ತರಬೇತಿ" ಆರಂಭಿಸಬೇಕಿತ್ತು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಸಿಆರ್‍ಪಿಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಚಿತ್ತೂರು ಶಾಲೆಯಲ್ಲಿ ಮೂಲಸೌಕರ್ಯಗಳು ಇಲ್ಲ ಎನ್ನುವುದು ನಿಜ. ಅಂತೆಯೇ ಸಿಲ್ಚೇರ್ ಹಾಗೂ ಶಿವಪುರಿ ಶಾಲೆಗಳಲ್ಲೂ ಯಾವ ಮೂಲಸೌಕರ್ಯಗಳೂ ಇಲ್ಲ. ಆಡಳಿತ ವ್ಯವಸ್ಥೆ ತನ್ನದೇ ವೇಗ ಹೊಂದಿರುತ್ತದೆ. ಆದರೆ ಅಧಿಕಾರಿಗಳಾದ ನಾವು ಲಭ್ಯವಿರುವ ಸಂಪನ್ಮೂಲಗಳನ್ನು ಸಾಧ್ಯವಾದಷ್ಟೂ ಉತ್ತಮ ಮಟ್ಟದಲ್ಲಿ ಬಳಸಿಕೊಳ್ಳುವುದನ್ನು ತಿಳಿದುಕೊಳ್ಳಬೇಕು. ಚಿತ್ತೂರಿನಲ್ಲಿ ಯಾವುದಾದರೂ ಬಗೆಯ ತರಬೇತಿ ಆರಂಭಿಸಬಹುದಿತ್ತು. ನಿಯೋಜನಾಪೂರ್ವ ತರಬೇತಿ ಕೂಡಾ ಒಂದು ಬಗೆಯ ಉಗ್ರನಿಗ್ರಹ ತರಬೇತಿ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"2018ರ ಫೆಬ್ರವರಿ 5ರಂದು ಬರೆದ ಪತ್ರದಲ್ಲಿ ರೈ ಅವರು, "ದೇಶದಲ್ಲಿ ಸಿಆರ್‍ ಪಿಎಫ್ ಗೆ ಮೂರು ಸಿಐಎಟಿ ಶಾಲೆಗಳಿವೆ. ಆದರೆ ಹೆಸರು ಸೂಚಿಸುವುದಕ್ಕೆ ವಿರುದ್ಧವಾಗಿ, ನಾವು ಈ ಸ್ಥಳಗಳಲ್ಲಿ ಸಿಐಎಟಿಗೆ ಸಂಬಂಧಿಸಿದ ಒಂದು ತರಬೇತಿ ಕೂಡಾ ನೀಡುತ್ತಿಲ್ಲ. ಕಾಶ್ಮೀರ ಕಣಿವೆಯಲ್ಲಿ ಉಗ್ರರಿಂದ, ಈಶಾನ್ಯದಲ್ಲಿ ಬಂಡಾಯದಿಂದ ಹಾಗೂ ಕೇಂದ್ರ ಭಾರತದಲ್ಲಿ ಎಡಪಂಥೀಯ ಉಗ್ರವಾದದ ಕಾರಣದಿಂದ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಸಿಆರ್‍ ಪಿಎಫ್ ಮುಂಚೂಣಿಯಲ್ಲಿದೆ ಎನ್ನುವುದು ಮತ್ತೂ ಅಚ್ಚರಿಯ ವಿಷಯ" ಎಂದು ವಿವರಿಸಿದ್ದರು.

2018ರ ನವೆಂಬರ್ 22ರಂದು ಬರೆದ ಪತ್ರದಲ್ಲಿ, “ಚಿತ್ತೂರು ಶಾಲೆ ಆರಂಭದಿಂದ ಪೂರ್ಣ ಪ್ರಮಾಣದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇಲ್ಲಿಗೆ ನಿಯೋಜಿಸಿದ  ಸಿಆರ್‍ ಪಿಎಫ್  ಸಿಬ್ಬಂದಿಗೆ ವೇತನ ಹಾಗೂ ಭತ್ಯೆಗಳನ್ನು ನೀಡುತ್ತಿದ್ದರೂ ತರಬೇತಿಯನ್ನು ಕೂಡಾ ನೀಡಲಾಗುತ್ತಿಲ್ಲ" ಎಂದು ವಿವರಿಸಿದ್ದರು.

ಚಿತ್ತೂರು ಶಾಲೆ 175 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿದ್ದು, 2014ರಲ್ಲಿ ಸ್ಥಾಪನೆಯಾಗಿದೆ. ಅಸ್ಸಾಂನ ಸಿಲ್ಚೇರ್ ಮತ್ತು ಮಧ್ಯಪ್ರದೇಶದ ಶಿವಪುರಿಯಲ್ಲಿ ಇತರ ಎರಡು ಶಾಲೆಗಳಿವೆ.

ರೈ ಪತ್ರದ ಅಂಶಗಳ ಬಗ್ಗೆ ನಿರ್ದಿಷ್ಟವಾಗಿ ಪ್ರತಿಕ್ರಿಯಿಸಲು ಇಂಡಿಯನ್ ಎಕ್ಸ್‍ಪ್ರೆಸ್ ಸಂಪರ್ಕಿಸಿದಾಗ ಅದಕ್ಕೆ ಸಿಆರ್‍ಪಿಎಫ್ ಸ್ಪಂದಿಸಿಲ್ಲ. ಆದಾಗ್ಯೂ “ದೇಶದ ವಿವಿಧೆಡೆ ಹೊಸದಾಗಿ ನೇಮಕಗೊಂಡವರಿಗೆ ಮೂಲಭೂತ ತರಬೇತಿಯಿಂದ ಅರಣ್ಯದಲ್ಲಿ ಹೋರಾಟದವರೆಗೆ, ಐಇಡಿ ತರಬೇತಿಯಿಂದ ಹಿಡಿದು, ಎಲ್‍ಡಬ್ಲ್ಯುಇ ಪ್ರದೇಶ, ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ನಿಯೋಜಿತರಾಗುವವರವರೆಗೆ 20 ವಿವಿಧ ಕೋರ್ಸ್‍ಗಳ ಮೂಲಕ ಸೂಕ್ತ ತರಬೇತಿ ನೀಡಲಾಗುತ್ತಿದೆ" ಎಂದು ಸಮರ್ಥಿಸಿಕೊಂಡಿದೆ.

ನಾಲ್ಕು ಕೇಂದ್ರೀಯ ತರಬೇತಿ ಕಾಲೇಜುಗಳ ಮೂಲಕ 15,256 ಮಂದಿಗೆ 2019ರಲ್ಲಿ ತರಬೇತಿ ನೀಡಲಾಗಿದ್ದು, ಸಿಐಎಟಿ ಶಾಲೆಗಳಲ್ಲಿ 6,903 ಮಂದಿಗೆ ತರಬೇತಿ ನೀಡಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಗಳಿಗೆ ಸಿಐಎಟಿ ಕೋರ್ಸನ್ನು ಚಿತ್ತೂರಿನಲ್ಲಿ ಆರಂಭಿಸಲಾಗಿದ್ದು, 1274 ಮಂದಿಗೆ ತರಬೇತಿ ನೀಡಲಾಗಿದೆ ಎಂದೂ ಹೇಳಿದೆ.

"ಈ ಶಾಲೆಗಳು ಕೇಂದ್ರಕ್ಕೆ ಸೀಮಿತವಾದ ವಿಶೇಷ ತರಬೇತಿಯನ್ನು ಸಿಐಎಟಿ ಕಾರ್ಯಾಚರಣೆಗೆ ನೀಡುತ್ತಿವೆ. ಈಶಾನ್ಯ ರಾಜ್ಯಗಳಿಗೆ ನಿರ್ದಿಷ್ಟವಾದ ತರಬೇತಿಯನ್ನು ಸಿಲ್ಚೇರ್ ಸಿಐಎಟಿನಲ್ಲಿ ಹಾಗೂ ಎಲ್‍ಡಬ್ಲ್ಯುಇ ನಿರ್ದಿಷ್ಟ ತರಬೇತಿಯನ್ನು ಶಿವಪುರಿ ಸಿಐಎಟಿಯಲ್ಲಿ ನೀಡಲಾಗುತ್ತಿದೆ” ಎಂದು ಸಿಆರ್‍ಪಿಎಫ್ ಸ್ಪಷ್ಟಪಡಿಸಿದೆ.

ರೈ ತಮ್ಮ ಪತ್ರದಲ್ಲಿ ಪಿಐ ಮತ್ತು ಸಿಐಎಟಿ ತರಬೇತಿಯ ನಡುವಿನ ವ್ಯತ್ಯಾಸವನ್ನು ಪಟ್ಟಿ ಮಾಡಿದ್ದಾರೆ. "ಪಿಐ ತರಬೇತಿಯನ್ನು ಹೊಸ ಕಾರ್ಯಾಚರಣೆ ರಂಗವನ್ನು ಪಾಲ್ಗೊಂಡದವರಿಗೆ ಪರಿಚಯಿಸುವ ಸಲುವಾಗಿ ನೀಡಲಾಗುತ್ತದೆ...ಆದರೆ ಸಿಐಎಟಿ ತರಬೇತಿಯನ್ನು ಕಾರ್ಯಾಚರಣೆ ಕಾರ್ಯತಂತ್ರಗಳು ಮತ್ತು ಉಗ್ರರ ಭೌದ್ಧಿಕ ಚಿತ್ರಣವನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ನೀಡಲಾಗುತ್ತದೆ. ಪಿಐ ತರಬೇತಿಯು ಕಾರ್ಯಾಚರಣೆ ರಂಗದ ಸಂಭಾವ್ಯ ಸವಾಲುಗಳ ಬಗ್ಗೆ ಹೇಳಿಕೊಟ್ಟರೆ ದಂಗೆ ಅಥವಾ ಭಯೋತ್ಪಾದನೆಯನ್ನು ಹೇಗೆ ನಿಭಾಯಿಸಬೇಕು ಎಂಬ ಕಾರ್ಯತಂತ್ರಗಳ ಬಗ್ಗೆ ತಿಳಿಸಲು ಆಳವಾದ ಸಿಐಎಟಿ ತರಬೇತಿಯೇ ಅಗತ್ಯ" ಎಂದು ಪ್ರತಿಪಾದಿಸಿದ್ದರು.

" ಸಿಆರ್‍ ಪಿಎಫ್ ಕಾರ್ಯಾಚರಣೆಯ ವಾಸ್ತವ ಮತ್ತು ಪಾರದರ್ಶಕ ವಿಶ್ಲೇಷಣೆಯ ಕೊರತೆಯಿಂದಾಗಿ, ತನ್ನ ತಪ್ಪುಗಳಿಂದ ಕಲಿತುಕೊಳ್ಳುವ ಸಾಂಸ್ಥಿಕ ಸಾಮರ್ಥ್ಯವನ್ನು ಹೊಂದಿಲ್ಲ" ಎಂದು ಬರೆದಿದ್ದರು.

2016ರಲ್ಲಿ ಈಶಾನ್ಯ ವಿಭಾಗದಲ್ಲಿ ನಿಯೋಜಿತರಾದ ವೇಳೆ ರೈ, 2015ರ ಸೆಪ್ಟೆಂಬರ್‍ ನಿಂದ ಸಿಲ್ಚೇರ್ ಶಾಲೆಯಲ್ಲಿ ಯಾವ ಸಿಐಎಟಿ ತರಬೇತಿಯನ್ನೂ ನೀಡಿಲ್ಲ ಎಂದು ಬರೆದಿದ್ದರು. ಸಿಆರ್‍ ಪಿಎಫ್ ಇತ್ತೀಚೆಗೆ ಕ್ಯೂಎಟಿ ತರಬೇತಿಯನ್ನು ಈಗ ಅಲ್ಲಿ ನೀಡುತ್ತಿದ್ದು, ಎಲ್‍ ಡಬ್ಲ್ಯುಇ ಪ್ರದೇಶಕ್ಕಾಗಿ ಇಂಥದ್ದೇ ಕೋರ್ಸ್ ಕಳೆದ ವರ್ಷ ಶಿವಪುರಿಯಲ್ಲಿ ಆರಂಭವಾಗಿದೆ ಎಂದು ಸಿಆರ್‍ ಪಿಎಫ್ ಮೂಲಗಳು ಹೇಳಿವೆ.

ಕಾಕತಾಳೀಯವೆಂದರೆ, ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಪ್ರಕರಣ ತನಿಖೆ ನಡೆಸುತ್ತಿದ್ದ ಗುಜರಾತ್ ಸಿಐಡಿ- ಅಪರಾಧ ವಿಭಾಗದ ಮೇಲ್ವಿಚಾರಣಾ ಅಧಿಕಾರಿಯಾಗಿ ರೈ ಕಾರ್ಯ ನಿರ್ವಹಿಸಿದ್ದರು. ಜತೆಗೆ ಡಿ.ಜಿ.ವಂಝಾರಾ, ಎಂ.ಎನ್.ದಿನೇಶ್, ರಾಜ್‍ಕುಮಾರ್ ಪಾಂಡ್ಯರನ್ನು ಅವರನ್ನು ಆಗ ಬಂಧಿಸಿದ್ದರು.

ಚಿತ್ತೂರು ಶಾಲೆಯ ಹಲವು ಸಮಸ್ಯೆಗಳ ಬಗ್ಗೆ ರಾಯ್ ಬರೆದ ಪತ್ರಗಳು ಎಚ್ಚರಿಕೆ ಸಂದೇಶ ರವಾನಿಸಿದ್ದವು:

* ಇದು 44 ಪೂರ್ವ ನಿರ್ಮಿತ ಗುಡಿಸಲುಗಳಲ್ಲಿ ಕಾರ್ಯಾಚರಿಸುತ್ತಿದ್ದು, ಯಾವುದೇ ಕಾಯಂ ನಿರ್ಮಾಣಗಳಿಲ್ಲ. ಮತ್ತೆ 26 ಇಂತಹ ಗುಡಿಸಲುಗಳನ್ನೇ ನಿರ್ಮಿಸಲು ಉದ್ದೇಶಿಸಲಾಗಿದೆ.

* ಸುಮಾರು 800 ಸಿಬ್ಬಂದಿಗಳಿಗೆ ಕೇವಲ 39 ಮಂದಿ ತರಬೇತಿ ಸಿಬ್ಬಂದಿಯನ್ನಷ್ಟೇ ಮಂಜೂರು ಮಾಡಲಾಗಿದೆ. ಈ ಪೈಕಿ 15 ಮಂದಿ ಮೇಲ್ವಿಚಾರಣಾ ಹೊಣೆಗಾರಿಕೆ ಹೊಂದಿದ್ದು, ಭೌತಿಕವಾಗಿ ಕೇವಲ ನಾಲ್ವರು ಮಾತ್ರ ಇದ್ದಾರೆ.

* ತರಬೇತಿ ಅಗತ್ಯತೆಯ ವಿಶ್ಲೇಷಣೆಯನ್ನು ಕೈಗೊಂಡಿಲ್ಲ ಹಾಗೂ ಭಯೋತ್ಪಾದಕ ನಿಗ್ರಹ ತರಬೇತಿಗೆ ಸ್ಪಷ್ಟವಾದ ನಿರ್ದೇಶನ ಇಲ್ಲ.

* ಆವರಣ ಗೋಡೆ ಅಥವಾ ಬೇಲಿ, ಯುದ್ಧ ತಡೆಗಳು, ದಾಳಿ ಕೋರ್ಸ್‍ ನ ಮೂಲಸೌಕರ್ಯಗಳಿಲ್ಲ. ಅಂತೆಯೇ ಓಡುವ ಟ್ರ್ಯಾಕ್ ಮತ್ತು ಐಇಡಿ ಸಂಬಂಧಿತ ತರಬೇತಿಗೆ ಐಇಡಿ ಲೇನ್ ಇಲ್ಲ.

* ಬಂದೂಕು ಅಭ್ಯಾಸಕ್ಕೆ ಫೈರಿಂಗ್ ರೇಂಜ್ ಇಲ್ಲ. ಇದಕ್ಕಾಗಿ ಮಂಜೂರು ಮಾಡಿದ 169 ಎಕರೆ ಪ್ರದೇಶಕ್ಕೆ ಭೂ ವ್ಯಾಜ್ಯ ಸುತ್ತಿಕೊಂಡಿದೆ. ಪೊಲೀಸ್ ರೇಂಜ್ 70 ಕಿಲೋಮೀಟರ್ ದೂರದಲ್ಲಿದ್ದು, ಅದರ ಲಭ್ಯತೆ ಖಾತ್ರಿ ಇಲ್ಲ. ಅಂತೆಯೇ ಕಾಡಿನ ತರಬೇತಿಗೆ ವ್ಯವಸ್ಥೆ, ಕಾಡಿನ ಹೋರಾಟದಲ್ಲಿ ಉಳಿದುಕೊಳ್ಳಲು ವಿಸ್ತೃತ ತರಬೇತಿ ನೀಡಲು ಒಳಾಂಗಣ ತರಗತಿ ಹಾಗೂ ಮರಳು ಮಾದರಿ ಟ್ಯುಟೋರಿಯಲ್ ವ್ಯವಸ್ಥೆ ಇಲ್ಲ.

* ಮಂಜೂರಾದ ಐದು ಕೊಳವೆಬಾವಿಗಳ ಪೈಕಿ ಒಂದನ್ನಷ್ಟೇ ಕೊರೆಯಲಾಗಿದೆ. ಇದು ಎಂಟು ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ನೀರಿನ ಟ್ಯಾಂಕಿಗೆ ಸಾಕಾಗುವುದಿಲ್ಲ.

Similar News