ಅಮಿತ್ ಶಾ 370ನೇ ವಿಧಿ ರದ್ದುಗೊಳಿಸುವ ಹಗಲುಗನಸು ಕಾಣುತ್ತಿದ್ದಾರೆ: ಮೆಹಬೂಬ ಮುಫ್ತಿ

Update: 2019-04-02 15:13 GMT

ಶ್ರೀನಗರ,ಎ.2: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ವ್ಯಂಗ್ಯವಾಡಿದ್ದಾರೆ.

“370ನೇ ವಿಧಿ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಜನರ ನಡುವಿನ ಸೇತುವೆಯಾಗಿದೆ. ಅದನ್ನು ತೆಗೆದು ಹಾಕಲು ಬಯಸುತ್ತಿರುವಿರಾದರೆ ನೀವು ಹಗಲು ಕನಸು ಕಾಣುತ್ತಿದ್ದೀರಿ ಎಂದು ನಾನು ಹೇಳಲು ಬಯಸುತ್ತೇನೆ” ಎಂದು ಮೆಹಬೂಬ ಅಮಿತ್ ಶಾರನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮೆಹಬೂಬ ಮುಫ್ತಿ, ಸಂವಿಧಾನದ ಈ ನಿಬಂಧನೆಯನ್ನು ತೆಗೆದು ಹಾಕಿದರೆ, ನಾನೂ ಸೇರಿದಂತೆ ಮುಖ್ಯ ವಾಹಿನಿಯ ರಾಜಕಾರಣಿಗಳು ತಮ್ಮ ಭವಿಷ್ಯದ ನಿರ್ಧಾರವನ್ನು ಪುನರ್‌ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 370ನೇ ವಿಧಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಜೊತೆಗೆ ರಾಜ್ಯಕ್ಕೆ ಸಂಬಂಧಿಸಿದ ಕಾನೂನು ರೂಪಿಸುವ ಸಂಸತ್‌ನ ಅಧಿಕಾರಕ್ಕೆ ಮಿತಿ ಹೇರುತ್ತದೆ. 370ನೇ ವಿಧಿ ಮತ್ತು 35-ಎಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಪಕ್ಷ ಬದ್ಧವಾಗಿದ್ದು, ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿರುವ ಕಾರಣ ಅದನ್ನು ಸದ್ಯ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ ಎಂದು ಅಮಿತ್ ಶಾ ರವಿವಾರ ಸುದ್ದಿ ವಾಹಿನಿಗೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಮೆಹಬೂಬ ಮುಫ್ತಿ ಈ ರೀತಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News