ರಫೇಲ್ ಬೆಲೆ ಏರಿಕೆ ಮಾಡಲು ಅಜಿತ್ ದೋವಲ್ ಕೇಂದ್ರಕ್ಕೆ ಒತ್ತಡ ಹೇರಿದ್ದರು: ಪೃಥ್ವಿರಾಜ್ ಚೌಹಾಣ್ ಆರೋಪ
ಪುಣೆ, ಎ. 2: ರಫೇಲ್ ಯುದ್ಧ ವಿಮಾನದ ಬೆಲೆ ಏರಿಸುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದ್ದರು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಸೋಮವಾರ ಆರೋಪಿಸಿದ್ದಾರೆ.
ರಫೇಲ್ ವಿಮಾನದ ಬೆಲೆಯನ್ನು 3.2 ದಶಲಕ್ಷ ಏರಿಕೆ ಮಾಡುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದ್ದರು. ಇದರ ಅಗತ್ಯ ಇರಲಿಲ್ಲ. ಭದ್ರತಾ ಸಲಹೆಗಾರರಾಗಿ ಬೆಲೆಯ ವಿಷಯದಲ್ಲಿ ಒತ್ತಡ ಹೇರಬಾರದಿತ್ತು. ಬೆಲೆ ನಿರ್ಧರಿಸಲು ಬೆಲೆ ಅನುಸಂಧಾನ ಸಮಿತಿ ಇತ್ತು ಎಂದು ಅವರು ಹೇಳಿದ್ದಾರೆ.
ಪುಣೆಯಲ್ಲಿ ಪುಸ್ತಕವೊಂದನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತಂತ್ರಜ್ಞಾನವನ್ನು ಹಿಂದೂಸ್ತಾನ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್)ಗೆ ವರ್ಗಾಯಿಸಲಾಗುವುದು ಎಂದು ಡಸ್ಸಾಲ್ಟ್ ಏವಿಯೇಶನ್ ಈ ಹಿಂದಿನ ಯುಪಿಎ ಸರಕಾರಕ್ಕೆ ಭರವಸೆ ನೀಡಿತ್ತು ಎಂದು ಅವರು ತಿಳಿಸಿದರು.
ಒಪ್ಪಂದದಂತೆ 18 ವಿಮಾನಗಳನ್ನು ಡಸ್ಸಾಲ್ಟ್ ನಿರ್ಮಿಸಲು ಹಾಗೂ ಉಳಿದ 108 ವಿಮಾನಗಳನ್ನು ರಫೇಲ್‌ನಿಂದ ತಂತ್ರಜ್ಞಾನವನ್ನು ವರ್ಗಾಯಿಸುವ ಮೂಲಕ ಭಾರತದ ಎಚ್‌ಎಎಲ್‌ನಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು. ರಫೇಲ್‌ನ ಕಾರ್ಯನಿರ್ವಹಣಾಧಿಕಾರಿ ಹೀಗೆ ಹೇಳಿರುವ ವೀಡಿಯೊ ಪುರಾವೆ ನಮ್ಮಲ್ಲಿ ಇದೆ. ಅನಂತರ ಸರಕಾರ ಒಪ್ಪಂದವನ್ನು ಬದಲಾಯಿಸಿರುವ ಬಗ್ಗೆ ಅನುಮಾನ ಮೂಡಿತು. ಇದರಿಂದ ಅದು ನಮ್ಮೊಂದಿಗೆ ತಂತ್ರಜ್ಞಾನ ವರ್ಗಾವಣೆ ಅಂಶಗಳಿಂದ ದೂರವಿರಲು ಆರಂಭಿಸಿತು ಎಂದು ಚೌಹಾಣ್ ಹೇಳಿದ್ದಾರೆ.
ರಫೇಲ್ ವಿಮಾನಗಳ ಬೆಲೆಯನ್ನು 3.2 ದಶಲಕ್ಷ ಹೆಚ್ಚಿಸುವುದನ್ನು ರಕ್ಷಣಾ ಸಾಮಗ್ರಿ ಹೊಂದುವ ಮಂಡಳಿ ಸಭೆ ನಿರಾಕರಿಸಿತ್ತು. ರಕ್ಷಣಾ ಸಾಮಗ್ರಿ ಹೊಂದುವ ಮಂಡಳಿಯ ಮೂರು ಸಭೆ ನಡೆದಿತ್ತು. ಆದರೆ, ಈ ನಿರ್ಧಾರ ತೆಗೆದುಕೊಳ್ಳಲು ಪಾರಿಕ್ಕರ್ ನಿರಾಕರಿಸಿದ್ದರು. ಆದುದರಿಂದ ರಾಷ್ಟ್ರೀಯ ರಕ್ಷಣೆಯ ಸಂಪುಟ ಸಮಿತಿ ಈ ನಿರ್ಧಾರ ತೆಗೆದುಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಪತ್ರಕ್ಕೆ ಸಹಿ ಹಾಕಿದರು. ಸುಷ್ಮಾ ಸ್ವರಾಜ್ ಹಾಗೂ ರಾಜನಾಥ್ ಸಿಂಗ್ ಈ ನಿರ್ಧಾರದ ಭಾಗವಾಗಿರಲಿಲ್ಲ. ಆದರೆ, ಅವರು ಇದಕ್ಕೆ ಸಾಕ್ಷಿಗಳಾಗಿದ್ದರು ಎಂದು ಚೌಹಾಣ್ ಹೇಳಿದ್ದಾರೆ.