ಅರುಣಾಚಲ ಪ್ರದೇಶದಲ್ಲಿ ಭಾಗಶಃ ಅಫ್ಸ್‌ಪಾ ಹಿಂದೆಗೆತ

Update: 2019-04-02 15:38 GMT

ಹೊಸದಿಲ್ಲಿ,ಎ.2: ಬರೋಬ್ಬರಿ 32 ವರ್ಷಗಳ ನಂತರ, ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ)ಕಾಯ್ದೆಯನ್ನು ಅರುಣಾಚಲಪ್ರದೇಶದ ಒಂಬತ್ತು ಜಿಲ್ಲೆಗಳ ಪೈಕಿ ಮೂರರಲ್ಲಿ ಭಾಗಶಃ ಹಿಂಪಡೆದುಕೊಳ್ಳಲಾಗಿದೆ.

ಆದರೆ ಮ್ಯಾನ್ಮಾರ್‌ಗೆ ತಾಗಿಕೊಂಡಿರುವ ಗಡಿಭಾಗದಲ್ಲಿ ಈ ಕಾಯ್ದೆ ಹಿಂದಿನಂತೆಯೇ ಜಾರಿಯಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1987ರ ಫೆಬ್ರವರಿ 20ರಂದು ರಚನೆಯಾದ ಅರುಣಾಚಲ ಪ್ರದೇಶಕ್ಕೆ 1958ರಲ್ಲಿ ಸಂಸತ್ ಜಾರಿಗೆ ತಂದ ವಿವಾದಾತ್ಮಕ ಎಎಫ್‌ಎಸ್‌ಪಿಎ (ಅಫ್ಸ್‌ಪಾ) ಕಾಯ್ದೆಯನ್ನು ಪರಿಚಯಿಸಲಾಯಿತು. ಅರುಣಾಚಲ ಪ್ರದೇಶದ ನಂತರ ಮೇಘಾಲಯ, ನಾಗಾಲ್ಯಾಂಡ್ ಮತ್ತು ಮಿರೆರಾಂ ರೂಪುಗೊಂಡವು ಮತ್ತು ಈ ರಾಜ್ಯಗಳಲ್ಲೂ ಅಫ್ಸ್‌ಪಾ ಜಾರಿ ಮಾಡಲಾಯಿತು.

ರಾಜ್ಯದಲ್ಲಿ ಸೇನೆಯ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದುಗೊಳಿಸುವಂತೆ ನ್ಯಾಯಾಧೀಶ ಬಿ.ಪಿ ಜೀವನ್ ರೆಡ್ಡಿ ಸಮಿತಿ ಸಲಹೆ ನೀಡಿತ್ತು. ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಉದ್ವಿಗ್ನ ಪ್ರದೇಶವೆಂದು ಘೋಷಿಸಲಾಗಿರುವ ಅರುಣಾಚಲ ಪ್ರದೇಶದ ನಾಲ್ಕು ಪೊಲೀಸ್ ಠಾಣೆಗಳನ್ನು ರವಿವಾರದಿಂದ ಅಫ್ಸ್‌ಪಾ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವಂತೆ ಸೂಚಿಸಿತ್ತು.

ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ಬಲೆಮು ಮತ್ತು ಬಕುಲ್ಪೊಂಗ್ ಪೊಲೀಸ್ ಠಾಣೆಗಳು ಹಾಗೂ ಪೂರ್ವ ಕಮೆಂಗ್ ಜಿಲ್ಲೆಯ ಸೀಜೋಸ ಪೊಲೀಸ್ ಠಾಣೆ ಮತ್ತು ಪಪುಂಪರೆ ಜಿಲ್ಲೆಯ ಬಲಿಜನ್ ಪೊಲೀಸ್ ಠಾಣೆಯನ್ನು ಸದ್ಯ ಸೇನೆಯ ವಿಶೇಷ ಅಧಿಕಾರ ಕಾಯ್ದೆಯಿಂದ ಹೊರಗಿಡಲಾಗಿದೆ. ಈ ಕಾಯ್ದೆಯಡಿಯಲ್ಲಿ ಭದ್ರತಾ ಪಡೆಗಳು ಯಾರನ್ನೂ ಬಂಧಿಸಬಹುದಾದ ಮತ್ತು ಎಲ್ಲಿಯೂ ಶೋಧ ನಡೆಸಬಹುದಾದ ಅಧಿಕಾರವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News