ಅಫ್ಸ್‌ಪಾ ಕಾಯ್ದೆ ಹಿಂಪಡೆ ವಿರುದ್ಧ ಕಾಂಗ್ರೆಸ್ ಗೆಳೆಯರಿಂದ ಪಿತೂರಿ: ಉಮರ್ ಅಬ್ದುಲ್ಲಾ

Update: 2019-04-02 15:52 GMT

ಬಾರಮುಲ್ಲಾ,ಎ.2: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಅಫ್ಸ್‌ಪಾ)ಗೆ ತಿದ್ದುಪಡಿ ತರುವ ಕಾಂಗ್ರೆಸ್ ಚುನಾವಣಾ ಭರವಸೆಯನ್ನು ಸ್ವಾಗತಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ, ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಅಫ್ಸ್‌ಪಾ ಕಾಯ್ದೆ ರದ್ದುಗೊಳಿಸುವ ವಿರುದ್ಧ ಕಾಂಗ್ರೆಸ್‌ನ ಕೆಲವು ಸ್ನೇಹಿತರು ಪಿತೂರಿ ಮಾಡಿದ್ದರು ಎಂದು ಆರೋಪಿಸಿದ್ದಾರೆ.

 ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರು ಈ ವಿಷಯವನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕಿತ್ತು. ಆ ಸಮಯದಲ್ಲಿ ನಾನು ಅಫ್ಸ್‌ಪಾ ಕಾಯ್ದೆಯನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದೆ. ಆದರೆ ಕಾಂಗ್ರೆಸ್‌ನ ಕೆಲವು ಗೆಳೆಯರು ಪಿತೂರಿ ಮಾಡಿದ್ದರು. ಅವರ ಹೆಸರು ಹೇಳಲು ನಾನು ಬಯಸುವುದಿಲ್ಲ. ನನಗೆ ಬೆಂಬಲ ನೀಡಿದವರು ಕೇವಲ ಪಿ.ಚಿದಂಬರಮ್ ಒಬ್ಬರೇ ಎಂದು ಅಬ್ದುಲ್ಲಾ ತಿಳಿಸಿದ್ದಾರೆ.

 ಮಂಗಳವಾರ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಗಲಭೆ ಪೀಡಿತ ಪ್ರದೇಶಗಳಲ್ಲಿ ಭಾರತೀಯ ಸಶಸ್ತ್ರಪಡೆಗಳಿಗೆ ವಿಶೇಷ ಅಧಿಕಾರ ನೀಡುವ ಅಫ್ಸ್‌ಪಾ ಕಾಯ್ದೆಯನ್ನು ಹಿಂಪಡೆಯುವುದಾಗಿ ತಿಳಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಲ್ಲಿರುವ ಪೀಡಿತ ಪ್ರದೇಶಗಳ ಕಾಯ್ದೆ ಮತ್ತು ಅಫ್ಸ್‌ಪಾ ಕಾಯ್ದೆಯನ್ನು ಪುನರ್‌ಪರಿಶೀಲಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಹೊರತಾಗಿ ನಾಗಾಲ್ಯಾಂಡ್, ಮಣಿಪುರ ಮತ್ತು ಇತರ ಕೆಲವು ಈಶಾನ್ಯ ರಾಜ್ಯಗಳಲ್ಲಿ ಆಫ್ಸ್‌ಪಾ ಕಾಯ್ದೆ ಜಾರಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News