×
Ad

ರಫೇಲ್ ಒಪ್ಪಂದದ ಕುರಿತ ಪುಸ್ತಕ ಬಿಡುಗಡೆಗೆ ಚುನಾವಣಾ ಆಯೋಗದ ತಡೆ

Update: 2019-04-02 21:29 IST

ಚೆನ್ನೈ,ಎ.2: ರಫೇಲ್ ಯುದ್ಧವಿಮಾನ ಒಪ್ಪಂದ ಕುರಿತು ಎಸ್.ವಿಜಯನ್ ಅವರು ರಚಿಸಿರುವ ‘ನಾಟ್ಟೈ ಉಳುಕ್ಕುಂ ರಫೇಲ್;ಬೇರಂ ಊಳಲ್’ ಪುಸ್ತಕದ ಬಿಡುಗಡೆಯನ್ನು ಮಂಗಳವಾರ ನಿಷೇಧಿಸಿರುವ ಚುನಾವಣಾ ಆಯೋಗವು ಇಲ್ಲಿಯ ಪ್ರಕಾಶನ ಸಂಸ್ಥೆ ‘ಭಾರತಿ ಪುಸ್ತಕಾಲಯಂ’ನಿಂದ ಪುಸ್ತಕದ ನೂರಾರು ಪ್ರತಿಗಳನ್ನು ವಶಪಡಿಸಿಕೊಂಡಿದೆ. ಪುಸ್ತಕವು ಇಂದು ಬಿಡುಗಡೆಯಾಗಲಿತ್ತು.

ರಫೇಲ್ ಒಪ್ಪಂದದ ಕುರಿತು ಕೆಲವು ಸೂಕ್ಷ್ಮ ಮಾಹಿತಿಗಳನ್ನು ಒಳಗೊಂಡಿರುವ ಈ ಪುಸ್ತಕದ ಬಿಡುಗಡೆಯು ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಪುಸ್ತಕ ಬಿಡುಗಡೆಯನ್ನು ನಿಷೇಧಿಸಿರುವುದನ್ನು ಸಿಪಿಎಂ ಖಂಡಿಸಿದೆ.

ಬೆಳಗ್ಗೆ ತನ್ನ ಮಳಿಗೆಯನ್ನು ಪ್ರವೇಶಿಸಿದ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್‌ನ ಅಧಿಕಾರಿಗಳು,ಪುಸ್ತಕವು ರಾಜಕೀಯವನ್ನು ಒಳಗೊಂಡಿರುವುದರಿಂದ ಅದನ್ನು ಬಿಡುಗಡೆಗೊಳಿಸುವಂತಿಲ್ಲ ಎಂದು ತಿಳಿಸಿದ್ದರು. ಪುಸ್ತಕದ ಬಿಡುಗಡೆಗೆ ತಾನು ಪೂರ್ವಾನುಮತಿಯನ್ನು ಪಡೆದುಕೊಂಡಿಲ್ಲ ಎಂದೂ ಅವರು ತಿಳಿಸಿದ್ದರು. ಇದು ತನಗೆ ಅಚ್ಚರಿಯನ್ನು ಮೂಡಿಸಿತ್ತು. ನಗರದಲ್ಲಿ ದಿನ ಬಿಟ್ಟು ದಿನ ಪುಸ್ತಕಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಅವರು ತನ್ನ ಪ್ರಕಾಶನದ ಪುಸ್ತಕವನ್ನು ಗುರಿ ಮಾಡಿಕೊಂಡಿದ್ದು ಏಕೆ ಎನ್ನುವುದು ಗೊತ್ತಾಗಿಲ್ಲ ಎಂದು ಭಾರತಿ ಪುಸ್ತಕಾಲಯಂ ಸಂಪಾದಕ ಪಿ.ಕೆ.ರಾಜನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News