×
Ad

ವಯನಾಡಿನ ಏಕತೆಗೆ ಅಪಾಯವನ್ನುಂಟು ಮಾಡಲು ಮೋದಿ ಪ್ರಯತ್ನ: ಐಯುಎಂಎಲ್ ಆರೋಪ

Update: 2019-04-02 22:10 IST

ವಯನಾಡ್,ಎ.2: ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿದ್ದಾರೆ ಎಂದು ಮಂಗಳವಾರ ಇಲ್ಲಿ ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ವಯನಾಡಿನಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿರುವ ಇಂಡಿಯನ್ ಲೀಗ್ ಮುಸ್ಲಿಂ ಯೂನಿಯನ್(ಐಯುಎಂಎಲ್)ನ ಹಿರಿಯ ನಾಯಕ ಸೈಯದ್ ಅಲಿ ಮುನವ್ವರ್ ತಂಙಳ್ ಅವರು, ಪ್ರಧಾನಿಯವರು ಎಲ್ಲ ಭಾರತೀಯರನ್ನೂ ಒಂದೇ ದೃಷ್ಟಿಯಲ್ಲಿ ನೋಡಬೇಕು ಎಂದರು.

ವಯನಾಡ್ ‘ವಿವಿಧತೆಯಲ್ಲಿ ಏಕತೆ’ಯ ಪ್ರತೀಕವಾಗಿದೆ ಎಂದು ಹೇಳಿದ ಮುಸ್ಲಿಂ ಯೂತ್ ಲೀಗ್‌ನ ರಾಜ್ಯಾಧ್ಯಕ್ಷರೂ ಆಗಿರುವ ತಂಙಳ್,ಬಹುಸಂಖ್ಯಾತ ಹಿಂದುಗಳ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ತನ್ನ ನಾಯಕರನ್ನು ಸ್ಪರ್ಧೆಗಿಳಿಸಲು ಕಾಂಗ್ರೆಸ್ ಹೆದರಿಕೊಂಡಿದೆ ಎಂಬ ಮೋದಿಯವರ ಹೇಳಿಕೆಯನ್ನು ಪ್ರಸ್ತಾಪಿಸಿ,ಪ್ರಧಾನಿಯಿಂದ ಇಂತಹ ಹೇಳಿಕೆಯನ್ನು ನಾವೆಂದೂ ನಿರೀಕ್ಷಿಸಿರಲಿಲ್ಲ ಎಂದರು. ವಯನಾಡಿನಿಂದ ರಾಹುಲ್ ಉಮೇದುವಾರಿಕೆಯು ಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಇತರ ಯುಪಿಎ ಅಂಗಪಕ್ಷಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಅವರು ತಿಳಿಸಿದರು.

ಸೋಮವಾರ ವಾರ್ಧಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ,ಗಣನೀಯ ಮುಸ್ಲಿಂ ಮತ್ತು ಕ್ರೈಸ್ತ ಜನಸಂಖ್ಯೆಯನ್ನು ಹೊಂದಿರುವ ವಯನಾಡಿನಿಂದ ಸ್ಪರ್ಧಿಸುತ್ತಿರುವ ರಾಹುಲ್‌ರನ್ನು ಹೆಸರಿಸದೆ ಈ ಹೇಳಿಕೆಯನ್ನು ನೀಡಿದ್ದರು.

ಚುನಾವಣೆಗಳಿಗೆ ಮುನ್ನ ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಉದ್ದೇಶದಿಂದ ಪ್ರಧಾನಿಯವರು ಇಂತಹ ಅಪಕ್ವ ಹೇಳಿಕೆಯನ್ನು ನೀಡಿದ್ದಾರೆ. ಅವರು ಈ ದೇಶದ ಜನರನ್ನು ಒಂದೇ ದೃಷ್ಟಿಯಿಂದ ನೋಡಬೇಕು. ನಾವೆಲ್ಲರೂ ಭಾರತೀಯರಾಗಿದ್ದೇವೆ ಎಂದು ತಂಙಳ್ ನುಡಿದರು.

ಗಣನೀಯ ಪ್ರಮಾಣದಲ್ಲಿ ಬುಡಕಟ್ಟು ಜನರನ್ನು ಹೊಂದಿರುವ ದುರ್ಗಮ,ಹಿಂದುಳಿದ,ಗುಡ್ಡಗಾಡು ಕ್ಷೇತ್ರದಿಂದ ಸ್ಪರ್ಧಿಸಿರುವುದಕ್ಕಾಗಿ ರಾಹುಲ್‌ರನ್ನು ಪ್ರಶಂಸಿಸಿದ ಅವರು,ಇದು ರೈತರು,ಬುಡಕಟ್ಟು ಜನರು ಮತ್ತು ಸಮಾಜದ ದುರ್ಬಲ ವರ್ಗಗಳೆಡೆಗೆ ಅವರ ಬದ್ಧತೆಯನ್ನು ತೋರಿಸುತ್ತದೆ ಎಂದರು.

ಉತ್ತರ ಪ್ರದೇಶದ ಅಮೇಠಿಯಿಂದಲೂ ಸ್ಪರ್ಧಿಸುತ್ತಿರುವ ರಾಹುಲ್ ಎರಡೂ ಕಡೆಗಳಲ್ಲಿ ಗೆದ್ದರೆ ವಯನಾಡ್ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News