ಸ್ವಾಮಿ ಅಸೀಮಾನಂದ ನಿರ್ದೋಷಿ?!

Update: 2019-04-02 18:39 GMT

ಇಂದಿನ ಭಾರತದ ನ್ಯಾಯದಾನ ವ್ಯವಸ್ಥೆಯನ್ನು ಗಮನಿಸಿದರೆ ಇಲ್ಲಿ ನ್ಯಾಯ ಪಡೆಯುವುದು ಹಾಗೂ ತಪ್ಪಿತಸ್ಥರನ್ನು ಶಿಕ್ಷಿಸುವುದು ಸುಲಭವಲ್ಲ ಅನ್ನಿಸುತ್ತದೆ. ನ್ಯಾಯಾಧೀಶರ ಮುಂದೆ ಕಾರ್ಯಾಂಗ ಮತ್ತು ಪೊಲೀಸರು ಸಾದರಪಡಿಸುವ ಸಾಕ್ಷಿ, ಪುರಾವೆಗಳ ಪರಿಣಾಮವಾಗಿ ನ್ಯಾಯಾಲಯದ ತೀರ್ಪುಗಳು ಹೊರಬೀಳುತ್ತವೆ.ಆಳುವ ಪಕ್ಷವು ಪ್ರತಿಪಾದಿಸುವ ಸಿದ್ಧಾಂತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸರಕಾರದ ನಿಲುವು, ಮನೋಧರ್ಮ ಏನು? ಎಂಬುದು ಈ ಸಿದ್ಧಾಂತಕ್ಕೆ ಸಂಬಂಧಿಸಿ ನಡೆಯುವ ಅಪರಾಧಗಳಲ್ಲಿ ಬಹಳ ಮುಖ್ಯವಾಗುತ್ತದೆ.

1992-93ರಲ್ಲಿ ಮುಂಬೈಯಲ್ಲಿ ನಡೆದ ಹಿಂಸೆಯಲ್ಲಿ ಸುಮಾರು ಒಂದು ಸಾವಿರ ಮಂದಿಯನ್ನು ಹತ್ಯೆಗೈಯಲಾಯಿತು. ಈ ನರಮೇಧದ ವೇಳೆ ನಡೆದ ಕ್ರೂರ, ಅಮಾನವೀಯ ಅಪರಾಧಗಳಿಗೆ ಸಂಬಂಧಿಸಿದಂತೆ ಬಹಳ ಮಂದಿಗೆ ಶಿಕ್ಷೆ ಆಗಲೇ ಇಲ್ಲ. ಈ ನರಮೇಧದ ಬಳಿಕ ನಡೆದ ಸ್ಫೋಟಕ ಕೃತ್ಯಗಳಲ್ಲಿ ಸುಮಾರು ಇನ್ನೂರು ಮಂದಿ ಮೃತಪಟ್ಟರು. ಈ ಪ್ರಕರಣಗಳಲ್ಲಿ ಅಪರಾಧಿಗಳಲ್ಲಿ ಕೆಲವರಿಗೆ ನೇಣುಶಿಕ್ಷೆ ವಿಧಿಸಲಾಯಿತು ಮತ್ತು ಇತರ ಹಲವರಿಗೆ ಇತರ ಶಿಕ್ಷೆಗಳನ್ನು ನೀಡಲಾಯಿತು. ಇದು ಒಂದು ಪ್ರಜಾಪ್ರಭುತ್ವದಲ್ಲಿ ಆಗಬೇಕಾದ ಸರಿಯಾದ ಕ್ರಮ. ಆದರೆ ಕಣ್ಣಿಗೆ ಎದ್ದು ಕಾಣುವ ಒಂದು ಪ್ರಕರಣವೆಂದರೆ ಮುಂಬೈ ಸ್ಫೋಟಗಳಲ್ಲಿ ಬಳಸಲಾದ ಕಾರಿನ ಮಾಲಕ ಎಂಬ ಕಾರಣಕ್ಕಾಗಿ ರುಬಿನಾ ಮೆಮೊನ್ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿದ್ದರೆ, ಮಾಲೇಗಾಂವ್ ಸ್ಫೋಟದಲ್ಲಿ ಯಾವ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್‌ಗೆ ಸೇರಿದ ಮೋಟಾರ್ ಸೈಕಲನ್ನು ಬಳಸಲಾಗಿತ್ತೋ, ಆಕೆಗೆ ಜಾಮೀನು ನೀಡಲಾಯಿತು. ಯಾವ ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟದಲ್ಲಿ 68 ಮಂದಿ (ಇವರಲ್ಲಿ 43 ಮಂದಿ ಪಾಕಿಸ್ತಾನದಿಂದ ಬಂದವರು) ಮೃತಪಟ್ಟರೋ, ಆ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ವಾಮಿ ಅಸೀಮಾನಂದರನ್ನು ಎನ್‌ಐಎ ನ್ಯಾಯಾಲಯವು ದೋಷಮುಕ್ತಗೊಳಿಸಿರುವಾಗ ಇದೆಲ್ಲಾ ನೆನಪಾಗುತ್ತದೆ.

ಥಾಂಗ್ಸ್‌ನಲ್ಲಿ ಶಬ್ರಿ ಕುಂಭಮೇಳವನ್ನು ಸಂಘಟಿಸುವುದರಲ್ಲಿ ಆರೆಸ್ಸ್‌ನ ಸ್ವಾಮಿ ಅಸೀಮಾನಂದ ಪ್ರಮುಖ ಪಾತ್ರ ವಹಿಸಿದ್ದರು. ಅವರು ಮಾಲೇಗಾಂವ್, ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಮತ್ತು ಸಂಜೋತಾ ಎಕ್ಸ್‌ಪ್ರೆಸ್ ಇತ್ಯಾದಿ ಹಲವು ಸ್ಫೋಟಗಳಲ್ಲಿ ಸೂತ್ರಧಾರಿಯಾಗಿದ್ದರು. ಈ ಎಲ್ಲಾ ಸ್ಫೋಟಗಳು 2006-2008ರ ಅವಧಿಯಲ್ಲಿ ನಡೆದಿದ್ದವು. ಮಾಲೇಗಾಂವ್ ಬಾಂಬ್ ಸ್ಫೋಟದಲ್ಲಿ ಬಳಸಲಾಗಿದ್ದ ಮೋಟಾರ್ ಸೈಕಲ್ ಸಾಧ್ವಿ ರಿತಂಬರಾಗೆ ಸೇರಿದ್ದು ಎಂದು ಮಹಾರಾಷ್ಟ್ರದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಯವರಿಗೆ ತಿಳಿದಾಗ ಬಾಂಬ್ ಸ್ಫೋಟಗಳ ಇಡೀ ಸರಣಿ ನಿಂತು ಹೋಯಿತು. ವಿಚಾರಣೆ ಮುಂದುವರಿದಂತೆ ಹಿಂದುತ್ವ ಸಿದ್ಧಾಂತದ ಹಲವು ಅನುಯಾಯಿಗಳು ಸ್ಫೋಟಗಳಲ್ಲಿ ಪಾತ್ರವಹಿಸಿರುವುದು ಬೆಳಕಿಗೆ ಬಂತು. ಆಗ ಹಿಂದೂ ರಾಷ್ಟ್ರೀಯವಾದಿಗಳು ಕರ್ಕರೆಯವರನ್ನು ಟೀಕಿಸಿ ಅವರ ಮೇಲೆ ದಾಳಿ ನಡೆಸಿದರು. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಕರ್ಕರೆಯವರನ್ನು ದೇಶದ್ರೋಹಿ ಎಂದು ಕರೆದರು. ಸಂಪೂರ್ಣ ವೃತ್ತಿಪರ ನಿಷ್ಠೆಯಿಂದ ಕರ್ಕರೆಯವರು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದರಾದರೂ ಇಂತಹ ಟೀಕೆಗಳು ಅವರನ್ನು ಸ್ವಲ್ಪ ಅಧೀರಗೊಳಿಸಿದವು. ಆಗ ಅವರು ತನ್ನ ಆತಂಕವನ್ನು ಅವರ ಮೇಲಿನ ಹಿರಿಯ ಹಾಗೂ ಪ್ರಾಮಾಣಿಕ ಅಧಿಕಾರಿ ಜೂಲಿಯೊ ರೆಬೀರೊ ಜತೆ ಹಂಚಿಕೊಂಡಿದ್ದರು

 ಪ್ರಜ್ಞಾ ಠಾಕೂರ್, ಅಸೀಮಾನಂದ ಮತ್ತು ಅವರ ಸಹವರ್ತಿಗಳು ಆ ಸ್ಫೋಟಗಳಲ್ಲಿ ಒಳಗೊಂಡಿದ್ದರೆಂಬುವುದು ಬೆಳಕಿಗೆ ಬಂದದ್ದು ಬಹಳ ದೊಡ್ಡ ವಿಷಯವಾಗಿತ್ತು. ಅಂದಿನ ಯುಪಿಎ ಸರಕಾರದ ಕೆಲವರು ಈ ಪ್ರಕರಣಗಳನ್ನು ‘ಹಿಂದೂ ಭಯೋತ್ಪಾದನೆ’ ಅಥವಾ ‘ಕೇಸರಿ ಭಯೋತ್ಪಾದನೆ’ ಎಂದು ಕರೆದರು. ಹೇಮಂತ್ ಕರ್ಕರೆಯವರು 2008 ರ 26/11 ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಅವರನ್ನು ರಾಷ್ಟ್ರದ್ರೋಹಿ ಎಂದು ಕರೆಯುತ್ತಿದ್ದವರಲ್ಲಿ ಕೆಲವರು ಈಗ ಅವರೊಬ್ಬ ಹುತಾತ್ಮ ಎಂದು ಘೋಷಿಸಿದರು. ಆ ಬಳಿಕ ರಾಜಸ್ಥಾನದ ಎಟಿಎಸ್ ತಂಡವು ವಿಚಾರಣೆಯನ್ನು ಮುಂದುವರಿಸಿತು. ಆಗ ಆರೆಸ್ಸೆಸ್‌ನ ಹಲವು ಮಂದಿ ಭಯೋತ್ಪಾದಕ ಕೃತ್ಯಗಳಲ್ಲಿ ಶಾಮಿಲಾಗಿರುವುದು ತಿಳಿದು ಬಂತು.

  ಆದರೆ 2014ರಲ್ಲಿ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದರೊಂದಿಗೆ ವಿಚಾರಣೆಯ ಹಾದಿ ಬದಲಾಯಿತು. ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ಮುಂಬೈಯ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್‌ರವರಿಗೆ ಈ ಪ್ರಕರಣಗಳಲ್ಲಿ ಮೃದು ಧೋರಣೆ ಸೆಳೆಯುವಂತೆ ಹೇಳಲಾಯಿತು. ಈಗ ಒಂದು ದಶಕದ ಬಳಿಕ ಹೇಮಂತ್ ಕರ್ಕರೆಯವರು ನಡೆಸಿದ್ದ ವಿಚಾರಣೆಯನ್ನು ಸಂಪೂರ್ಣವಾಗಿ ಬದಿಗೆ ತಳ್ಳಲಾಗಿದೆ.

 ಸ್ವಾಮಿ ಅಸೀಮಾನಂದರು ಪ್ರಕರಣದಲ್ಲಿ, ಬಂಧನವಾದ ಬಳಿಕ ಅವರು ನ್ಯಾಯಾಧೀಶರೊಬ್ಬರ ಮುಂದೆ ತಪ್ಪೊಪ್ಪಿಗೆ ಹೇಳಿಕೆಯೊಂದನ್ನು ನೀಡಿದ್ದರು. ಇದು ಪೊಲೀಸ್ ಕಸ್ಟಡಿಯಲ್ಲಿ ನೀಡಿದ ಹೇಳಿಕೆಯಲ್ಲ.ಎರಡು ದಿನಗಳ ನ್ಯಾಯಾಂಗ ಬಂಧನದ ಬಳಿಕ ನ್ಯಾಯಾಧೀಶರ ಮುಂದೆ ನೀಡಿದ ತಪ್ಪೊಪ್ಪಿಗೆಯಲ್ಲಿ ಅಸೀಮಾನಂದರು 2007-2008 ರಲ್ಲಿ ನಡೆದ ಸ್ಫೋಟಗಳಲ್ಲಿ ತಾನು ಮುಖ್ಯಪಾತ್ರ ವಹಿಸಿದ್ದಾಗಿಯೂ, ಸ್ಫೋಟಗಳನ್ನು ಯೋಜಿಸಿದ್ದಾಗಿಯೂ ಒಪ್ಪಿಕೊಂಡಿದ್ದರು. ಏನೆಲ್ಲ ನಡೆಯುತ್ತಿದೆಯೆಂದು ಉನ್ನತ ಮಟ್ಟದ ಆರೆಸ್ಸೆಸ್ ನಾಯಕರಿಗೆ ತಿಳಿದಿತ್ತೆಂದು ಕೂಡ ಅವರು ಸೂಚಿಸಿದರು. ಬಳಿಕ ತಾನು ಒತ್ತಡದಲ್ಲಿ ಆ ಹೇಳಿಕೆ ನೀಡಿದ್ದೆಂದು ಹೇಳಿ ಅದನ್ನು ಹಿಂದೆ ಪಡೆದರು.

ಈಗ ಈ ದೇಶದಲ್ಲಿ ನ್ಯಾಯದಾನ ವ್ಯವಸ್ಥೆಯು ಕಾರ್ಯಾಂಗವನ್ನು ಮತ್ತು ಪೊಲೀಸರು ನ್ಯಾಯಾಧೀಶರಿಗೆ ಮೊಕದ್ದಮೆಯ ವಿವರಗಳನ್ನು ಸಲ್ಲಿಸುವ ರೀತಿಯನ್ನು ಅವಲಂಬಿಸಿದೆಯೆಂದು ಸ್ಪಷ್ಟವಾಗುತ್ತದೆ.ಈಗ ಏಳುವ ಪ್ರಶ್ನೆ: ಸ್ಫೋಟಗಳಲ್ಲಿ ಮಡಿದ 68 ಮಂದಿಯ ಸಾವಿಗೆ ಯಾರು ಜವಾಬ್ದಾರಿ? ಯಾರೂ ಜವಾಬ್ದಾರರಲ್ಲವೇ?

ಮತೀಯವಾದಿ ರಾಷ್ಟ್ರೀಯತೆಗಾಗಿ ನ್ಯಾಯದಾನ ಪ್ರಕ್ರಿಯೆಯನ್ನೇ ಬದಿಗೆ ತಳ್ಳುವ ಸತತ ಪ್ರಯತ್ನವೊಂದಕ್ಕೆ ನಾವೀಗ ಮೂಕ ಪ್ರೇಕ್ಷಕರಾಗುತ್ತಿದ್ದೇವೆ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News